ದೈವ ನಿಂದನೆ ವಿರುದ್ಧ ಕ್ರಮಕ್ಕೆ ಒತ್ತಾಯ

ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಸದಾಶಿವ ರೈ, ಪಿ.ಎಂ.ರವಿ, ಜಯರಾಮ್  ಇತರರಿದ್ದರು.
ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಸದಾಶಿವ ರೈ, ಪಿ.ಎಂ.ರವಿ, ಜಯರಾಮ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈವ ನಿಂದನೆ ವಿರುದ್ಧ ಕ್ರಮಕ್ಕೆ ಒತ್ತಾಯ
  • ಕೊಡಗು ಜಿಲ್ಲಾ ದೈವ ಆರಾಧಕರು, ದೈವ ನರ್ತಕರ ಸಂಘದ ಮಹಾಸಭೆ
ಮಡಿಕೇರಿ: ದೈವ ನಿಂದನೆ, ಅವಮಾನ, ಅಪಹಾಸ್ಯ, ಕಾರ್ಯಕ್ರಮಗಳಲ್ಲಿ ದೈವ ನರ್ತನಗಳ ಬಳಕೆಯನ್ನು ತೀವ್ರವಾಗಿ ವಿರೋಧಿಸಲಾಗುವುದು ಮತ್ತು ಇದರ ವಿರುದ್ಧ ಸರಕಾರದ ಮಟ್ಟದಲ್ಲಿ ಕ್ರಮಕ್ಕಾಗಿ ಒತ್ತಾಯಿಸಲಾಗುವುದು ಎಂದು ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಮಹಾಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ಮಡಿಕೇರಿಯ ಬಾಲಭವನದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಪಾಲ್ಗೊಂಡ ದೈವ ಆರಾಧಕರು ಹಾಗೂ ದೈವ ನರ್ತಕರು ಇತ್ತೀಚಿನ ದಿನಗಳಲ್ಲಿ ತಮ್ಮ ಭಾವನೆಗೆ ದಕ್ಕೆಯಾಗುತ್ತಿರುವುದನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಜಿಲ್ಲಾಧ್ಯಕ್ಷ ಸದಾಶಿವ ರೈ, ದೈವಾರಾಧನೆಯ ಆಚಾರ, ವಿಚಾರವನ್ನು ಕ್ರಮಬದ್ಧವಾಗಿ ಮಾಡುವಂತಾಗಬೇಕು. ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ಹಾಗೂ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೈವ ನರ್ತನ ಬಳಕೆಯಾಗದಂತೆ ಮತ್ತು ದೈವವನ್ನು ಅನುಕರಣೆ ಮಾಡದಂತೆ ನೋಡಿಕೊಳ್ಳಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ದೈವ ನರ್ತನದ ಕಾರ್ಯಕ್ರಮಗಳೇ ನಡೆಯುತ್ತಿದ್ದು, ದೈವಕ್ಕೆ ಅಪಹಾಸ್ಯ ಮಾಡಿದಂತಾಗುತ್ತಿದೆ. ಅಲ್ಲದೆ ದೈವ ಆರಾಧಾಕರ ಭಾವನೆಗೆ ದಕ್ಕೆಯಾಗುತ್ತಿದೆ. ಆದ್ದರಿಂದ ಸರಕಾರದ ಮಟ್ಟದಲ್ಲಿ ಈ ವಿಚಾರವನ್ನು ಪಸ್ತಾಪಿಸಿ ದೈವ ನಂಬಿಕೆಗೆ ವಿರುದ್ಧವಾದ ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ದೈವಸ್ಥಾನಗಳಿದ್ದು, ದೈವ ಆರಾಧಕರುಗಳು ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಸದಾಶಿವ ರೈ ಮನವಿ ಮಾಡಿದರು.
ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಮೂಲ ನಂಬಿಕೆ, ಮೂಲ ಆಧಾರ ಮತ್ತು ಮೂಲ ಪದ್ಧತಿಯೇ ದೈವಾರಾಧನೆಯಾಗಿದೆ. ದೈವ ಆರಾಧನೆ ಪ್ರದರ್ಶನದ ಕಲೆಯಲ್ಲ ಮತ್ತು ಪ್ರಚಾರದ ಆಚರಣೆಯೂ ಅಲ್ಲ. ದೈವಾರಾಧನೆ ಉಳಿಯಬೇಕಾದರೆ ದೈವದ ಮೇಲೆ ನಂಬಿಕೆ ಗಟ್ಟಿಯಾಗಬೇಕಾಗಿದೆ ಎಂದರು.
ದೈವಾರಾಧನೆಗೆ ಚ್ಯುತಿ ಬಾರದಂತೆ ಕ್ರಮಬದ್ಧವಾಗಿ ನಡೆಸುವಂತಾಗಬೇಕು. ಸಂಘದ ಮೂಲಕ ದೈವ ಸಂಸ್ಕೃತಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕು, ದೈವಾರಾಧನೆಗೆ ಸಂಬಂಧಪಟ್ಟ ಪದ್ಧತಿ, ಪರಂಪರೆಯನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ರಸಿದ್ಧ ದೈವ ನರ್ತಕ ಬೊಳಿಮಜಲು ಜಯರಾಮ್ ಮಾತನಾಡಿ, ದೈವಾರಾಧನೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿದ್ದು, ನಮ್ಮ ಹಿರಿಯರು ಹೇಳಿಕೊಟ್ಟಿರುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಎಂದರು.
ಪ್ರಮುಖರಾದ ಪವನ್ ಮೊಗೇರ, ಮಂಜುನಾಥ್ ಪೂಜಾರಿ, ಮಂಜುನಾಥ ಕತ್ತಲೆಕಾಡು, ರಾಜೀವ ಲೋಚನ್, ಹರೀಶ್ ಜಿ.ಆಚಾರ್ಯ, ಧರ್ಮಪ್ಪ ಅಡ್ಡಾನಪರೆ ಮತ್ತಿತರರು ಮಾತನಾಡಿ ಸಲಹೆಗಳನ್ನು ನೀಡಿದರು. ಸಂಘದ ಹಿರಿಯ ಸಲಹೆಗಾರರಾದ ಕೆ.ಕೆ.ದೇವಪ್ಪ, ವಿದ್ಯಾಶ್ರೀ ಪಡುಮಲೆ, ಹಿರಿಯ ಸದಸ್ಯ ರಾಜು ರೈ ಸುಂಟ್ಟಿಕೊಪ್ಪ, ಖಜಾಂಚಿ ಜನಾರ್ಧನ ಪೂಜಾರಿ, ದೈವ ಆರಾಧಕಿ ಸುಮ ಕೆದಮೂಳ್ಳುರು, ಲೀಲಾ ಶೇಷಮ್ಮ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ, ಸುಬ್ರಹ್ಮಣ್ಯ, ಹುಣಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ದೈವ ಆರಾಧಕರು ಹಾಗೂ ದೈವ ನರ್ತಕರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net