ಹದಿಹರೆಯದಲ್ಲಿ ತೆಗೆದುಕೊಳ್ಳುವ ತೀರ್ಮಾನ ಮಹತ್ವದ್ದು

ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು.
ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು.
Published on
ಗೋಣಿಕೊಪ್ಪಲು:
ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆ ಹಾಗೂ ಸಿಇಟಿ ಪರೀಕ್ಷೆ ತರಬೇತಿಯ ಅಗತ್ಯತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ.ಇ.ಟಿ. ಹಾಗೂ ನೀಟ್ ತರಬೇತಿ ವಿಭಾಗದ ಸಂಯೋಜಕ ಅರುಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿ.ಇ.ಟಿ. ಮತ್ತು ನೀಟ್ ಪರೀಕ್ಷೆಗಳ ಮಹತ್ವ, ಅಧ್ಯಯನದ ವೈಜ್ಞಾನಿಕ ವಿಧಾನಗಳು, ಸಮಯದ ಸಮರ್ಪಕ ನಿರ್ವಹಣೆ ಹಾಗೂ ಯಶಸ್ಸು ಸಾಧಿಸಲು ಅನುಸರಿಸಬೇಕಾದ ತಂತ್ರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿ ನೀಡಿದರು.
ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 500ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದರೆ ವೈದ್ಯಕೀಯ ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್ಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಹೆಚ್ಚಿರುತ್ತದೆ. 200-500 ಅಂಕಗಳ ನಡುವೆ ಪಡೆದ ವಿದ್ಯಾರ್ಥಿಗಳಿಗೆ ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ನ್ಯೂಟ್ರಿಷನ್, ಡೆಂಟಲ್, ಆಯುರ್ವೇದ, ಹೋಮಿಯೋಪಥಿ, ವೆಟರ್ನರಿ ಸೇರಿದಂತೆ ಹಲವು ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ ಅವಕಾಶಗಳಿವೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಎರಡೂ ವರ್ಷಗಳು ಸಮಾನ ಮಹತ್ವ ಹೊಂದಿದ್ದು, ಮೊದಲ ವರ್ಷದ ಪಠ್ಯವನ್ನು ಎರಡನೇ ವರ್ಷದಲ್ಲಿ ನಿರಂತರವಾಗಿ ಪುನರಾವರ್ತನೆ ಮಾಡಬೇಕು. ಬೋರ್ಡ್ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎರಡಕ್ಕೂ ಸಮಾನವಾಗಿ ಸಿದ್ಧತೆ ನಡೆಸುವುದು ಯಶಸ್ಸಿನ ಗುಟ್ಟು ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ನಿವೃತ್ತ ಪ್ರಾಂಶುಪಾಲರಾದ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನ ಮಹತ್ವದ ತಿರುವಾಗಿದ್ದು, ಈ ಹಂತದಲ್ಲಿ ಶೇ. 100ರಷ್ಟು ಶ್ರಮ ಮತ್ತು ಏಕಾಗ್ರತೆ ತೋರಿದರೆ ಭವಿಷ್ಯ ಉಜ್ವಲವಾಗುತ್ತದೆ. ಹದಿಹರೆಯದ ಅವಧಿಯು ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಹಂತವಾಗಿದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಭವಿಷ್ಯದ ಮೇಲೆ ಪರಿಣಾಮ ಬೀರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾಕಷ್ಟು ಚಿಂತನೆ ಮಾಡಬೇಕು. ಸಮಸ್ಯೆಗಳು ಎದುರಾದರೆ ಮುಚ್ಚಿಡದೆ ಪೋಷಕರು ಹಾಗೂ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಮದ್ಯಪಾನ, ಮಾದಕ ವಸ್ತುಗಳು, ಧೂಮಪಾನ ಹಾಗೂ ಅನಗತ್ಯ ಸಂಬAಧಗಳಿAದ ದೂರವಿದ್ದು ಗುರಿಯತ್ತ ಗಮನಹರಿಸಬೇಕು. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ವಿದ್ಯಾಭ್ಯಾಸಕ್ಕೂ ಸಮಾನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಮತೋಲನದಿಂದ ಸಾಗಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಸ್. ಎಸ್. ಮಾದಯ್ಯ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಕಲಿಕೆ, ವ್ಯಕ್ತಿತ್ವ ವಿಕಾಸ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೋಷಕ-ಶಿಕ್ಷಕ ಸಂಘಪ್ರಮುಖ ವೇದಿಕೆಯಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕುರಿತು ನಿರಂತರವಾಗಿ ಗಮನಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಪೋಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ರೇಷ್ಮಾ, ಸಂಚಾಲಕ ಲೆಫ್ಟಿನೆಂಟ್ ಅಕ್ರಂ, ಉಪನ್ಯಾಸಕರಾದ ಜೆಸಿಂತಾ, ಚೇತನ್ ಚಿಣ್ಣಪ್ಪ, ಜಶ್ಮೀ, ಕರೀಷ್ಮಾ ಹಾಗೂ ಯಶೋಧ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net