ನೂತನ ಗೌಡ ಸಮಾಜ ನಿರ್ಮಾಣಕ್ಕೆ ನಿರ್ಧಾರ

ವಿರಾಜಪೇಟೆ ಗೌಡ ಸಮಾಜಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ಅವರಿಗೆ ಅಭಿನಂದನಾ ಸಲ್ಲಿಸಲಾಯಿತು.
ವಿರಾಜಪೇಟೆ ಗೌಡ ಸಮಾಜಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ಅವರಿಗೆ ಅಭಿನಂದನಾ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಗೌಡ ಸಮಾಜ ನಿರ್ಮಾಣಕ್ಕೆ ನಿರ್ಧಾರ
  • ವಿರಾಜಪೇಟೆ ಗೌಡ ಸಮಾಜದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತೀರ್ಮಾನ
ಮಡಿಕೇರಿ:ವಿರಾಜಪೇಟೆ ಗೌಡ ಸಮಾಜಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಸಮಾಜ ಸೇವಕ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಹಾಗೂ ಜಾನಕಿ ದಂಪತಿಗಳ ಪುತ್ರರಾದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭ ವಿರಾಜಪೇಟೆ ಗೌಡ ಸಮಾಜದಲ್ಲಿ ನಡೆಯಿತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಚಿದಾನಂದ ಅವರು ಸುಮಾರು ೨೦ ವರ್ಷಗಳಿಂದ ಬಾಕಿ ಉಳಿದಿದ್ದ ಭೂಮಿಯ ನೋಂದಣಿ ಪ್ರಕ್ರಿಯೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಹಾಗೂ ಅವರ ತಂಡವು ನಮ್ಮೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದಾರೆ. ಇದೀಗ ಜಾಗ ಗೌಡ ಸಮಾಜದ ಅಧೀನದಲ್ಲಿದ್ದು, ಶೀಘ್ರ ಉತ್ತಮವಾದ ಗೌಡ ಸಮಾಜವನ್ನು ನಿರ್ಮಿಸಿ ಎಂದು ಕರೆ ನೀಡಿದರು.
ಡಾ.ಕೆ.ವಿ.ರೇಣುಕಾ ಪ್ರಸಾದ್ ಮಾತನಾಡಿ, ಗೌಡ ಸಮಾಜಕ್ಕೆ ದೊರೆತ್ತಿರುವ ಜಾಗದಲ್ಲಿ ಸುಂದರವಾದ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಎಂದು ಸಲಹೆಯನ್ನು ನೀಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ, ಸುಮಾರು ೨೦ ವರ್ಷಗಳಿಂದ ಸಮಾಜದ ಪ್ರಮುಖರು ಜಾಗಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ದಾರೆ. ಒಕ್ಕೂಟದ ಎಲ್ಲಾ ನಿರ್ದೇಶಕರು ಹಾಗೂ ದಾನಿಗಳ ಸಹಕಾರದಿಂದ ಇದೀಗ ನೋಂದಣಿ ಮಾಡಲಾಗಿದೆ. ಉತ್ತಮವಾದ ಸಮಾಜ ನಿರ್ಮಾಣದ ಯೋಜನೆಗೆ ಒಕ್ಕೂಟ ಬೆಂಬಲವಾಗಿ ನಿಲ್ಲಲಿದೆ. ಶೀಘ್ರ ಮಹಾಸಭೆ ನಡೆಸಿ ಅನುಭವಸ್ಥರು ಹಾಗೂ ಯುವಕರಿಂದ ಕೂಡಿದ ಆಡಳಿತ ಮಂಡಳಿಯನ್ನು ರಚಿಸಿ ಮುಂದಿನ ಕಾರ್ಯಚಟುವಟಿಕೆಗಳಿಗೆ ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು.
ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಮಾತನಾಡಿ, ಸಮಾಜಕ್ಕೆ ಬರುವ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಾನು ಶಾಸಕನಾಗಿದ್ದಾಗ ಅನುದಾನ ಕೊಡಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಕ್ರೋಢೀಕರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಗೌಡರು ಹಾಗೂ ಕೊಡವರು ಸಹಬಾಳ್ವೆಯಿಂದ ಇರಬೇಕು. ನಮ್ಮ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು ಎಂದ ಅವರು, ವಿರಾಜಪೇಟೆ ಗೌಡ ಸಮಾಜಕ್ಕೆ ಎಂಎಲ್‌ಸಿ ಅನುದಾನದಿಂದ ೫ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುಪಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರಿಗೆ ವಿರಾಜಪೇಟೆ ಗೌಡ ಸಮಾಜದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು.
ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟ್ಟಿ ವಾಸು ಗಣಪತಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಡಾ.ರಾಜೇಶ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್, ಸರ್ವ ನಿರ್ದೇಶಕರುಗಳು, ಕೊಡಗು, ಬೆಂಗಳೂರು, ಮೈಸೂರು ಸೇರಿದಂತೆ ಕೊಡಗಿನ ಎಲ್ಲಾ ಭಾಗಗಳ ಗೌಡ ಸಮಾಜಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net