ಗೃಹಲಕ್ಷ್ಮಿ ಸಾಧಕಿಯರಿಗೆ ಸನ್ಮಾನಕ್ಕೆ ತೀರ್ಮಾನ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ್ ಇದ್ದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೃಹಲಕ್ಷ್ಮಿ ಸಾಧಕಿಯರಿಗೆ ಸನ್ಮಾನಕ್ಕೆ ತೀರ್ಮಾನ

ಮಡಿಕೇರಿ: ಗೃಹಲಕ್ಷ್ಮಿ ಯೋಜನೆಯ ನೆರವು ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಹಾಗೂ ಸಾಮಾಜಿಕ, ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಸಾಧಕ ಮಹಿಳೆಯರ ಯಶೋಗಾಥೆ, ವಿಡಿಯೋ, ಫೋಟೊ ಹಾಗೂ ಸ್ವ-ವಿವರಗಳನ್ನು ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಯಿತು.
ಆಹಾರ ಶಾಖೆಯಿಂದ ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಗ್ರಾಮವಾರು ಮಾಹಿತಿ ಪಡೆದು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮರಣ ಹೊಂದಿದ ಫಲಾನುಭವಿಗಳ ಮರಣ ದೃಡೀಕರಣ ಪಡೆದು ಲಾಗಿನ್ ಇಂದ ಡಿಲೀಟ್ ಮಾಡಲಾಗುತ್ತಿದೆ. ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ ೧೭೧ ಮರಣ ಫಲಾನುಭವಿಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ಯುವನಿಧಿ ಯೋಜನೆಯ ನಿಯಮದಂತೆ ನಿರುದ್ಯೋಗಿಗಳು ಪ್ರತಿ ತಿಂಗಳ ೨೫ರೊಳಗೆ ಸ್ವಯಂ ಘೋಷಣೆ ನೀಡಿದಲ್ಲಿ ಮಾತ್ರ ಡಿಬಿಟಿ ಪಾವತಿಯಾಗುತ್ತದೆ. ಮುಖ್ಯ ಕಚೇರಿಯಿಂದ ಸ್ವೀಕೃತವಾದ ಜೂನ್-೨೦೨೬ರ ಡಿಬಿಟಿ ದತ್ತಾಂಶವು ಕೊಡಗು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು ೬೨೬ ಫಲಾನುಭವಿಗಳು ಮಾತ್ರ ಡಿಬಿಟಿಗೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಬಹುತೇಕ ಫಲಾನುಭವಿಗಳಿಗೆ ಡಿಬಿಟಿ ಆಗದಿರಲು ಪ್ರಮುಖ ಕಾರಣವೆಂದರೆ ೪೭೨ ಫಲಾನುಭವಿಗಳು ಮಾಸಿಕ ಸ್ವಯಂ ಘೋಷಣೆ ನೀಡಿರುವುದಿಲ್ಲ. ಮುಖ್ಯ ಕಚೇರಿಯ ದತ್ತಾಂಶದಂತೆ ಫಲಾನುಭವಿಗಳು ತಾವು ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆ ಮಾಡಿದ್ದಾರೆ. ಇನ್ನು ೧೬೬ ಅರ್ಜಿಗಳನ್ನು ಭೌತಿಕ ಪರಿಶೀಲನೆ ವೇಳೆ ತಿರಸ್ಕರಿಸಲಾಗಿದೆ ಎಂದರು.
ಸಮಿತಿ ಸದಸ್ಯರಾದ ಫ್ಯಾನ್ಸಿ ಪಾರ್ವತಿ ಮಾತನಾಡಿ, ಮುಕ್ಕೋಡ್ಲು ಭಾಗಕ್ಕೆ ಹಳೇಯ ಬಸ್‌ಗಳು ಬರುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಆದ್ದರಿಂದ ನೂತನ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು.
ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಬಸ್ ಚಾಲಕರು ಸಮಯ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಗೃಹಜ್ಯೋತಿ ಯೋಜನೆಯ ಇಲಾಖಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಶೇ.೯೮.೮೧ ರಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಮಾತನಾಡಿ, ಸರ್ವರ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ, ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಆಹಾರ ನಿರೀಕ್ಷಕರಾದ ವೀಣಾ ಮಾತನಾಡಿ, ಸೆ.೧ ರಿಂದ ೧೫ರ ವರೆಗೆ ಅಭಿಯಾನ ನಡೆಯಲಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ, ವರ್ಗಾವಣೆ ಮಾಡುವ ಪ್ರಕ್ರೀಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಞಣ್ಠನ ಸಮಿತಿ ಸದಸ್ಯರಾದ ರಂಗಪ್ಪ, ಮಿಟ್ಟು ಸೋಮಯ್ಯ, ಪೆರುಮುಂಡ ಮನು ಪೆರಾಜೆ, ದಯಾನಂದ ಮರಗೋಡು, ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net