ದಶಮಂಟಪ ಅನುದಾನ ರೂ. 2.50 ಲಕ್ಷಕ್ಕೆ ಹೆಚ್ಚಳ

ಶಾಸಕ ಎ.ಎಸ್.ಪೊನ್ನಣ್ಣ ಪ್ರಕಟ
ದಶಮಂಟಪಗಳ ಸಮಿತಿ ಸಭೆ
ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ದಶಮಂಟಪಗಳ ಸಮಿತಿ ಸಭೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು. ಚೇತನ್, ಸುದೀಶ್ ರೈ ಇತರರಿದ್ದರು.ಗೋಣಿಕೊಪ್ಪ
Published on: 

ಗೋಣಿಕೊಪ್ಪ: 48ನೇ ವರ್ಷದ ದಸರಾ ಉತ್ಸವದ ವೈಭವಕ್ಕೆ ಮೆರಗು ನೀಡುವ ದಶಮಂಟಪಗಳ ಆರ್ಥಿಕತೆಗೆ ನೆರವಾಗುವ ನಿಟ್ಟಿನಲ್ಲಿ, ಪ್ರತಿ ದಶಮಂಟಪಕ್ಕೆ ನೀಡುತ್ತಿದ್ದ ಅನುದಾನವನ್ನು ರೂ.2 ಲಕ್ಷದಿಂದ ರೂ.2.50 ಲಕ್ಷಕ್ಕೆ ಹೆಚ್ಚಿಸುವುದಾಗಿ ಕಾವೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಘೋಷಿಸಿದರು.

ಇಲ್ಲಿನ ಕಾವೇರಿ ಕಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದಶಮಂಟಪಗಳ ಸಮಿತಿ ಸಭೆಯಲ್ಲಿ ಮಂಟಪಗಳ ಪದಾಧಿಕಾರಿಗಳ ಬೇಡಿಕೆಗಳಿಗೆ ಸ್ಪಂದಿಸಿದ ಅವರು, ಅನುದಾನ ಹೆಚ್ಚಳದ ನಿರ್ಧಾರ ಪ್ರಕಟಿಸಿದರು. ಅತ್ಯುತ್ತಮ ಕಲಾಕೃತಿ ಪ್ರದರ್ಶಿಸುವ ದಶಮಂಟಪಕ್ಕೆ ಪ್ರಥಮ ಬಹುಮಾನವಾಗಿ ರೂ.50 ಸಾವಿರ, ದ್ವಿತೀಯ ಬಹುಮಾನವಾಗಿ ರೂ.30 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ.20 ಸಾವಿರ ನೀಡುವುದಾಗಿ ತಿಳಿಸಿದರು.

ಕಳೆದ ಬಾರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ರೂ.75 ಲಕ್ಷ ಅನುದಾನ ದೊರೆತಿತ್ತು. ಈ ಬಾರಿ ಶೇ.25ರಷ್ಟು ಹೆಚ್ಚಳದೊಂದಿಗೆ ರೂ.1 ಕೋಟಿ ಅನುದಾನ ಲಭಿಸಿದೆ. ಅದರಂತೆ, ಕಳೆದ ಬಾರಿ ದಶಮಂಟಪಗಳಿಗೆ ನೀಡಿದ್ದ ರೂ.2 ಲಕ್ಷ ನೆರವನ್ನು ಶೇ.50ರಷ್ಟು ಹೆಚ್ಚಿಸಿ ರೂ.2.50 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕನಿಷ್ಠ 5 ಲಕ್ಷ ರೂ. ನೆರವು ಸಿಗಲಿ: ದಶಮಂಟಪಗಳ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವರ್ತಕರಿಂದ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಸಹಕಾರ ದೊರೆಯುತ್ತಿಲ್ಲ. ನೆರವು ಕೇಳಲು ಹೋದಾಗ ದಸರಾಗೆ ಕೋಟ್ಯಂತರ ರೂಪಾಯಿ ಅನುದಾನ ಬಂದಿದೆ ಎಂಬ ಉತ್ತರ ಎದುರಾಗುತ್ತಿದೆ. ಹೀಗಾಗಿ ಪ್ರತಿ ದಸಮಂಟಪಕ್ಕೆ ಕನಿಷ್ಠ ರೂ.5 ಲಕ್ಷ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ, ದಸರಾ ಉತ್ಸವದ ಖರ್ಚು-ವೆಚ್ಚಗಳ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಸಲ್ಲಿಸಿದ ಬಳಿಕ ಉಳಿಕೆಯಾಗುವ ಹಣದಿಂದ ಹೆಚ್ಚುವರಿ ನೆರವು ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಪಷ್ಟ ಭರವಸೆ ಇಲ್ಲ: ಸ್ನೇಹಿತರ ಬಳಗ ಕೊಪ್ಪ ಸಮಿತಿ ಅಧ್ಯಕ್ಷ ಸುದೀಶ್ ರೈ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾವೇರಿ ದಸರಾ ಸಮಿತಿ ಅಧ್ಯಕ್ಷರು ವೈಯಕ್ತಿಕವಾಗಿ ಹಣ ಹಾಕಿ ದಸರಾ ನಡೆಸಿದ್ದೇವೆ ಎಂಬ ನಷ್ಟದ ಲೆಕ್ಕ ನೀಡುತ್ತಿದ್ದಾರೆ. ಈ ಬಾರಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಹೆಚ್ಚುವರಿ ನೆರವು ಸಿಗುವ ಬಗ್ಗೆ ಸ್ಪಷ್ಟ ಭರವಸೆ ಇಲ್ಲ ಎಂದು ಹತಾಶೆ ವ್ಯಕ್ತಪಡಿಸಿದರು.

ದಸರಾ ಮುಗಿದ ಕೂಡಲೇ ಲೆಕ್ಕಪತ್ರ ಮಂಡಿಸಿದರೆ ದಶಮಂಟಪಗಳಿಗೆ ಅನುಕೂಲವಾಗಲಿದೆ. ಲೆಕ್ಕಪತ್ರ ಸಲ್ಲಿಕೆಗೆ ದೀರ್ಘಕಾಲ ತೆಗೆದುಕೊಳ್ಳುವುದರಿಂದ ಮಂಟಪಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಯಾರೂ ಬೇಸರಪಡುವ ಅಗತ್ಯವಿಲ್ಲ. ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಲಾಗುವುದು ಎಂದರು.

ಕಾಡ್ಲಯ್ಯಪ್ಪ ಸಮಿತಿ ಅಧ್ಯಕ್ಷ ಶಾಜಿ ಅಚ್ಚುತ್ತನ್ ಮಾತನಾಡಿ, ಕಳೆದ ಬಾರಿ ಅತ್ಯುತ್ತಮ ತೀರ್ಪುಗಾರರ ಆಯ್ಕೆಯಿಂದ ಯಾವುದೇ ಗೊಂದಲವಿಲ್ಲದೆ ಬಹುಮಾನ ಘೋಷಿಸಲು ಸಾಧ್ಯವಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ತೀರ್ಪುಗಾರರನ್ನು ನೇಮಕ ಮಾಡಿ ಪಾರದರ್ಶಕತೆ ಕಾಪಾಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಬಿ.ಎನ್.ಪ್ರಕಾಶ್, ಎಚ್.ಬಿ.ಮುರುಗ, ನಾರಾಯಣಸ್ವಾಮಿ ನಾಯ್ಡು, ಪ್ರಭಾಕರ್ ನೆಲ್ಲಿತ್ತಾಯ, ಮಲ್ಲಂಡ ಧ್ಯಾನ್ ಇತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಜನಮನ ತಲುಪಿದೆ: ಈ ಬಾರಿ ದಸರಾ ಉತ್ಸವ ಅತ್ಯುತ್ತಮವಾಗಿ ನಡೆಯುತ್ತಿದ್ದು, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ತಲುಪಿವೆ. ಮಾಧ್ಯಮಗಳು ಕೂಡ ಟೀಕೆಗೆ ಸೀಮಿತವಾಗದೆ ಉತ್ಸವದ ಯಶಸ್ಸಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಖ್ಯಾತ ಗಾಯಕ ಸಂಜಿತ್ ಹೆಗಡೆ ಹಾಗೂ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ದಸರಾ ಉತ್ಸವದಲ್ಲಿ ಭಾಗವಹಿಸುವ ಮೂಲಕ ಯುವಜನರಿಗೆ ಪ್ರೇರಣೆಯಾಗುತ್ತಿದ್ದಾರೆ ಎಂದರು.

ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಪ್ರಧಾನ ಸಂಚಾಲಕ ಬಿ.ಎನ್.ಪ್ರಕಾಶ್, ದಸಮಂಟಪಗಳ ಸಮಿತಿ ಅಧ್ಯಕ್ಷ ಚೇತನ್, ಕಾವೇರಿ ದಸರಾ ಸಮಿತಿ ಕಾರ್ಯದರ್ಶಿ ವರಲಕ್ಷ್ಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪಾರುವಂಗಡ ದಿಲನ್ ಚಂಗಪ್ಪ, ಸದಸ್ಯೆ ಚಂದನ ಮಂಜುನಾಥ್, ಉಪಾಧ್ಯಕ್ಷ ನಾಯಂದಿರ ಶಿವಾಜಿ, ಸಂಯೋಜಕರುಗಾಳಾದ ಚಂದನ್ ಕಾಮತ್, ಮನೆಯಪಂಡ ಶೀಲಾ ಬೋಪಣ್ಣ, ಚಂದನ ಮಂಜುನಾಥ್, ರೋಶನ್, ಶೋಭಿತ್, ಓಮನ್, ಧ್ಯಾನ್ ಸುಬ್ಬಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net