ಬೆಸಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ

ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದೆ.
ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದೆ.
Published on
ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಸಗೂರು ಗ್ರಾಮದ ಕೊಕ್ಕಲೆಮಾಡ ದಾದಾ ಸೋಮಯ್ಯ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಸೋಮವಾರ ಬೆಳಗಿನ ಜಾವ ಸುಮಾರಿಗೆ 3.30 ಗಂಟೆಯಲ್ಲಿ ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದೆ. ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಎಂದಿನಂತೆ ಕಟ್ಟಿ ಹಾಕಿದ್ದ ರಾಸುಗಳ ಕೂಗುವ ಶಬ್ದ ಕೇಳಿದ ಹಸುವಿನ ಮಾಲೀಕ ದಾದಾ ಸೋಮಯ್ಯ ಅವರು ಮನೆಯಿಂದ ಹೊರ ಬಂದು ನೋಡಿದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿರುವುದು ಕಂಡು ಬಂದಿದೆ. ಕೊಡಲೇ ಪೊನ್ನಂಪೇಟೆ ಉಪವಲಯ ಅರಣ್ಯಾಧಿಕಾರಿ ಕೆ. ಜಿ. ದಿವಾಕರ್ ಅವರಿಗೆ ಮಾಹಿತಿ ನೀಡಿದ ಮೇರೆಗೆ ಕೂಡಲೇ ವಲಯ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ಆರ್‌ಆರ್‌ಟಿ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಸಗೂರು ಗ್ರಾಮದ ಭದ್ರಕಾಳಿ ದೇವರ ಕಾಡು ಹಾಗೂ ನಲ್ಲೂರು ಗ್ರಾಮದ ಅಯ್ಯಪ್ಪ ದೇವರ ಕಾಡು ಹಾಗೂ ಇನ್ನಿತರ ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಹುಲಿಯ ಹೆಜ್ಜೆ ಗುರುತು ಕಂಡು ಬಂದಿದೆ. ಹುಲಿಯ ಹೆಜ್ಜೆಯ ಗುರುತನ್ನು ಆಧರಿಸಿ ಹುಲಿಯ ಚಲನವಲನ ವೀಕ್ಷಿಸಲು ಸಿಸಿ ಕ್ಯಾಮೆರಾ ಹಾಗೂ ಹುಲಿ ಸೆರೆಗೆ ಬೋನ್ ಅಳವಡಿಸಲಾಗಿದೆ.
ಬಾಳಲೆ ಪಶುವೈದ್ಯಾಧಿಕಾರಿ ಭವಿಷ್ಯತ್ ಕುಮಾರ್ ಅವರು ಹಸುವಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹಸುವಿನ ಕಳೇಬರವನ್ನು ಹೂಳಲಾಯಿತು. ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪವಲಯ ಅರಣ್ಯಾಧಿಕಾರಿ ಕೆ. ಜಿ ದಿವಾಕರ್, ಗಸ್ತು ಅರಣ್ಯಪಾಲಕ ಅಣ್ಣಯ್ಯ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net