ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಳ್ಳ ಗ್ರಾಮದ ದೊಡ್ಡಹಡ್ಲು ಹಾಡಿಯಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ದೊಡ್ಡಹಡ್ಲು ಗ್ರಾಮದ ಕೃಷ್ಣ ಅವರ ಗರ್ಭಿಣಿ ಹಸುವನ್ನು ಶುಕ್ರವಾರ ಮನೆ ಸಮೀಪದಲ್ಲಿ ಮೇಯಲು ಬಿಟ್ಟಿದ್ದರು. ಸಮೀಪದ ಸಂಜೆ ಅರಣ್ಯದಿಂದ ಬಂದ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಅಲ್ಲದೆ ಕೊಂದಿರುವ ಹಸುವನ್ನು ಸುಮಾರು 100 ಮೀಟರ್‌ಗಳಷ್ಟು ದೂರಕ್ಕೆ ಎಳೆದುಕೊಂಡು ಹೋಗಿದೆ. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.