ಸಹಕಾರ ಮನೋಭಾವದಿಂದ ಯಶಸ್ಸು ಸಾಧ್ಯ

ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಹಕಾರ ಅರಿವು ಕಾರ್ಯಕ್ರಮದಲ್ಲಿ ಪಿ.ಯು.ರಾಬಿನ್ ದೇವಯ್ಯ ಮಾತನಾಡಿದರು. ವಿಜಯ್, ಮಹದೇಪ್ಪ ಇತರರಿದ್ದರು.
ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಹಕಾರ ಅರಿವು ಕಾರ್ಯಕ್ರಮದಲ್ಲಿ ಪಿ.ಯು.ರಾಬಿನ್ ದೇವಯ್ಯ ಮಾತನಾಡಿದರು. ವಿಜಯ್, ಮಹದೇಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಮನೋಭಾವದಿಂದ ಯಶಸ್ಸು ಸಾಧ್ಯ
  • ಸಹಕಾರ ಅರಿವು ಕಾರ್ಯಕ್ರಮದಲ್ಲಿ ಪಿ.ಯು.ರಾಬಿನ್ ದೇವಯ್ಯ ಅಭಿಮತ
ಮಡಿಕೇರಿ: ಸಹಕಾರ ಮನೋಭಾವ ಇದ್ದರೆ ಪ್ರತಿಯೊಬ್ಬರು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಹೇಳಿದರು.
ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಹಕಾರ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಾಳಿನ ವೃತ್ತಿ ಶಿಕ್ಷಣ ಪಡೆಯುತ್ತಾರೆ. ಯಶಸ್ಸು ಸಾಧಿಸಲು ಸಹಕಾರದ ಮನೋಭಾವ ಅಗತ್ಯ. ಸಹಕಾರದ ಅಡಿಪಾಯವಿದ್ದರೆ ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಯುತ್ತದೆ ಎಂದು ತಿಳಿಸಿದ ಅವರು, ಸಹಕಾರ ಕ್ಷೇತ್ರ ಎಲ್ಲಾ ರಂಗವನ್ನು ತಲುಪಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಸಚಿವಾಲಯವು ವಿವಿಧ ಕಾರ್ಯಕ್ರಮಗಳನ್ನು ನಿಗದಿಪಡಿಸಿದೆ. ಅಂತೆಯೇ ಈಗಾಗಲೇ ರೈತರ ಸಮಾವೇಶ, ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಿದ್ದು ಆರೋಗ್ಯ ತಪಾಸಣೆ, ಸ್ವಚ್ಛತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಅಲ್ಲದೆ ಅನಾಥ ಮಕ್ಕಳಿಗೆ ಕೊಡುಗೆ ನೀಡುವ ಕಾರ್ಯಕ್ರಮವನ್ನು ಸಹ ಏರ್ಪಡಿಸಲು ಉದ್ದೇಶಿಸಿರುತ್ತೇವೆ ಎಂದು ತಿಳಿಸಿದರು.
ಸಹಕಾರ ಎಂಬುದು ಕೇವಲ ಸಂಸ್ಥೆಯಲ್ಲ, ಅದು ವಿಶ್ವಾಸ, ಪಾರದರ್ಶಕತೆ, ಸ್ವಾವಲಂಬನೆ ಮತ್ತು ಸಮೂಹ ಅಭಿವೃದ್ಧಿಯ ಚಳವಳಿಯಾಗಿದೆ. ಸಹಕಾರದಿಂದ ಸಮೃದ್ಧಿ ಎಂಬುದು ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿ ತರುವ ರಾಷ್ಟ್ರೀಯ ಸಂಕಲ್ಪ ಎಂದು ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಾಹ್ಯ ಪ್ರಪಂಚದ ಅರಿವು ಪಡೆಯಬೇಕು. ಆಗ ಮಾತ್ರ ಅಂತರಶಕ್ತಿ ವೃದ್ಧಿಸುತ್ತದೆ ಎಂದು ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ಮೈಸೂರು ಕೆ.ಐ.ಸಿ.ಎಂ. ಉಪನ್ಯಾಸಕ ಮಹದೇಪ್ಪ ಅವರು ಸಹಕಾರದ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ವ್ಯವಸ್ಥಾಪಕಿ ಆರ್.ಮಂಜುಳ, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮೋಹನ್, ಉಪನ್ಯಾಸಕರಾದ ಸಂಜೀವ್, ಸಂದೀಪ್ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net