ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಟಿ.ಜಿ.ಪ್ರೇಮಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಆರ್‌ಎಫ್‌ಓ ಪ್ರಮೋದ್, ಡಿಆರ್‌ಎಫ್‌ಓಗಳಾದ ಎಂ.ಗಣೇಶ್, ಹರೀಶ್, ಶಿಕ್ಷಕರಾದ ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ರಮ್ಯ, ಇತರರು ಇದ್ದರು.
ನೆಲ- ಜಲ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹೇಳಿದರು. ಕುಶಾಲನಗರ ತಾಲೂಕು ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ
ಜಿಲ್ಲಾ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಅರಣ್ಯ ಸಸಿ ನೆಟ್ಟು ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಉತ್ತಮ ಭವಿಷ್ಯಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ನೀಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಬೇಕು. ಪರಿಸರದ ಸಮತೋಲನ ಸುಸ್ಥಿತಿಗಾಗಿ, ಜೀವ ವೈವಿಧ್ಯತೆಯ ರಕ್ಷಣೆಗಾಗಿ, ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಹಾಗೂ ಜೀವ ಸಂಕುಲದ ಉಳಿವಿಗಾಗಿ ಅರಣ್ಯ ಹಾಗೂ ವನ್ಯಜೀವಿಗಳು ಮತ್ತು ಜೀವಿ- ವೈವಿಧ್ಯವನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ.
ನಾವು ನೈಸರ್ಗಿಕ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದಿದ್ದರೆ ನಾವು ಸುರಕ್ಷಿತ ಬದುಕು ಕಂಡುಕೊಳ್ಳಬಹುದು.
ಪ್ರತಿಯೊಬ್ಬರೂ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ತೊಡಗಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಾಗುತ್ತದೆ ಎಂದರು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಪ್ರಮೋದ್ ಮಾತನಾಡಿ,
ಅರಣ್ಯ ಸಸಿ ನೆಟ್ಟು ಬೆಳೆಸುವಲ್ಲಿ ನಾಗರಿಕರ ಸಹಭಾಗಿತ್ವ ಅಗತ್ಯ. ಸೋಮವಾರಪೇಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1.26 ಲಕ್ಷ ಗಿಡ ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ನಾಗರಿಕರು ಹಾಗೂ ಶಾಲಾ – ಕಾಲೇಜು ವಿದ್ಯಾರ್ಥಿಗಳಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಸಹಕರಿಸಬೇಕು. ಇಂದು ಪರಿಸರ ಸಂರಕ್ಷಣೆ ಎಂಬುದು ನಮ್ಮೆಲ್ಲರ ಆದ್ಯ ಕರ್ತವ್ಯ, ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಈ ದಿಸೆಯಲ್ಲಿ ಭವಿಷ್ಯತ್ತಿನ ದೃಷ್ಠಿಯಲ್ಲಿ ನಾವು ಅರಣ್ಯ ಮತ್ತು ಪರಿಸರ ಸಂರಕ್ಷಣೆಯತ್ತ ಮೊತ್ತಮೊದಲ ಹೆಜ್ಜೆಹಾಕಿ ಮುನ್ನುಗ್ಗಬೇಕಿದೆ.
ಆದ್ದರಿಂದ ನಾವು ಈ ಪ್ರಕೃತಿಯನ್ನು ಸಂರಕ್ಷಿಸಿ ಈ ಜಗತ್ತನ್ನು ಮಾಲಿನ್ಯರಹಿತ ಪರಿಸರದಿಂದ ಕೂಡಿದ ಸುಂದರ ತಾಣವನ್ನಾಗಿ ಮಾಡಲು ಕಂಕಣ ಬದ್ಧರಾಗಬೇಕಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯ
ಡಿಆರ್‌ಎಫ್‌ಓಗಳಾದ ಎಂ.ಗಣೇಶ್, ಎನ್.ಬಿ. ಹರೀಶ್ ಕುಮಾರ್, ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ. ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ,ಗ್ರಾಮಸ್ಥರು
ಇದ್ದರು.
ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.
ಶಿಕ್ಷಕರು, ವಿದ್ಯಾರ್ಥಿಗಳು ಮತ್ತು
ಅರಣ್ಯ ಸಿಬ್ಬಂದಿ ಪರಿಸರಕ್ಕೆ ಸಂಬಂಧಿಸಿದ ಪ್ರಚಾರ ಫಲಕಗಳನ್ನು ಹಿಡಿದು ಕೂಡ್ಲೂರು ಗ್ರಾಮದಲ್ಲಿ ಪರಿಸರ ಜಾಗೃತಿ ಮೂಡಿಸಿದರು.