ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ಕೊಡವ ಜನಾಂಗ ಕಿರಿದಾದರೂ ಜನಾಂಗದ ವ್ಯಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಉನ್ನತ ಸ್ಥಾನಮಾನ ಅಲಂಕರಿಸಿದ್ದಾರೆ ಎಂದರು.
ಕೃಷಿಯಲ್ಲಿ ಬದುಕು ಕಂಡು ಜೀವನ ಸಾಗಿಸುತ್ತಿದ್ದ ಹಲವರು ಪ್ರಸ್ತುತ ಕಷ್ಟ ಎಂದು ಭಾವಿಸಿ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಯುವಜನರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು ಅವರು, ಕ್ರೀಡಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಸಾಧನೆಗೆ ಗುರಿ ಮತ್ತು ಛಲ ಮುಖ್ಯ. ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಲು ನಿರಂತರ ಪ್ರಯತ್ನ ಸಾಗಬೇಕಿದೆ ಎಂದರು.
ನೆಕ್ಟರ್ ಫ್ರೆಷ್ ಮತ್ತು ವೀರವ್ರತಂ ಫೌಂಡೇಷನ್‌ನ ಸಂಸ್ಥಾಪಕಿ, ವ್ಯವಸ್ಥಾಪಕ ನಿರ್ದೇಶಕಿ ಕುಪ್ಪಂಡ ಛಾಯಾ ನಂಜಪ್ಪ ರಾಜಪ್ಪ ಮಾತನಾಡಿ, ಗ್ರಾಮಗಳಲ್ಲಿ ಒಗ್ಗಟ್ಟು ನೆಲೆ ನಿಲ್ಲಬೇಕಾದರೆ ರಾಜಕೀಯ ಬದಿಗೊತ್ತಿ, ದೇಶದ ಯಾವುದೇ ಭಾಗ ಹಾಗೂ ವಿದೇಶದಲ್ಲಿ ನೆಲೆ ಕಂಡುಕೊಂಡರೂ ನಮ್ಮ ಆಚಾರ, ವಿಚಾರ ಮತ್ತು ಸಂಸ್ಕೃತಿ ಮರೆತು ಜೀವಿಸಬೇಡಿ. ಧರ್ಮವನ್ನು ನಾವು ಕಾಪಾಡಿದಲ್ಲಿ ಧರ್ಮವು ನಮ್ಮನ್ನು ಕಾಪಡುತ್ತದೆ ಎಂದು ಮನಗಾಣಬೇಕಿದೆ ಎಂದರು.
ಕಾಕೋಟುಪರಂಬು ಕೈಲ್ ಮುಹೂರ್ತ ಸಂಘದ ವಜ್ರಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಮಂಡೇಟಿರ ಎಂ.ಸುರೇಶ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಜನಾಂಗಕ್ಕೆ ವಿರಳವಾದ ಹಬ್ಬಗಳು ಆಚರಣೆಯಲ್ಲಿದ್ದರೂ ನಮ್ಮ ಪೂರ್ವಜರು ಎಲ್ಲ ಹಬ್ಬಗಳಿಗೆ ವಿಶೇಷ ಅರ್ಥ ಕಲ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಸಮಾರಂಭದ ಅರ್ಥಪೂರ್ಣ ಆಚರಣೆಗಾಗಿ ಕಾಕೋಟುಪರಂಬು, ನಾಲ್ಕೇರಿ, ಕುಂಜಿಲಗೇರಿ, ಮೈತಾಡಿ ಬೆಳ್ಳುಮಾಡು, ಅರಮೇರಿ ಗ್ರಾಮಗಳ ವಾಸಿಗಳಿಗಾಗಿ 3 ದಿನಗಳಕಾಲ ವಿವಿದ ಆಟೋಟ ಸ್ಪರ್ಧೆಗಳನ್ನು ಅಯೋಜಿಸಿ ಯಶಸ್ಸು ಕಂಡಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಸದಸ್ಯರು, ದಾನಿಗಳಿಗೆ ಧನ್ಯವಾದ ಸಮರ್ಪಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಯಾ.ಬಿದ್ದಂಡ ನಾಣಿ ದೇವಯ್ಯ, ಕಬ್ಬಚೀರ ರಶ್ಮೀ ಕಾರ್ಯಪ್ಪ, ವಜ್ರ ಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕಾಕೋಟುಪರಂಬು, ನಾಲ್ಕೇರಿ, ಕುಂಜಿಲಗೇರಿ, ಮೈತಾಡಿ ಬೆಳ್ಳುಮಾಡು, ಅರಮೇರಿ ಗ್ರಾಮಗಳ ಗ್ರಾಮಸ್ಥರು ಇದ್ದರು.
ಇದೇ ವೇಳೆ ವಜ್ರಮಹೋತ್ಸವ ಆಚರಣಾ ಸಮಿತಿ ವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು.