ಗೋಣಿಕೊಪ್ಪದಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಾಣ

ಗೋಣಿಕೊಪ್ಪ ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಶಾಸಕ   ಎ.ಎಸ್.ಪೊನ್ನಣ್ಣ ಹಾಗೂ ಸುಜಾ ಕುಶಾಲಪ್ಪ ಜ್ಯೋತಿ ಬೆಳಗಿಸಿದರು. ಪ್ರಮೋದ್ ಗಣಪತಿ,  ಪ್ರಶಾಂತ್, ಬಾಲ ಅಪ್ಪಣ್ಣ ,  ಮೀದೆರೀರ ನವೀನ್, ಪಿ.ಕೆ.ಪೊನ್ನಪ್ಪ, ಅಜಿತ್ ಅಯ್ಯಪ್ಪ, ವಿಜಯ್ ಗಣಪತಿ ಇದ್ದರು.
ಗೋಣಿಕೊಪ್ಪ ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಸುಜಾ ಕುಶಾಲಪ್ಪ ಜ್ಯೋತಿ ಬೆಳಗಿಸಿದರು. ಪ್ರಮೋದ್ ಗಣಪತಿ, ಪ್ರಶಾಂತ್, ಬಾಲ ಅಪ್ಪಣ್ಣ , ಮೀದೆರೀರ ನವೀನ್, ಪಿ.ಕೆ.ಪೊನ್ನಪ್ಪ, ಅಜಿತ್ ಅಯ್ಯಪ್ಪ, ವಿಜಯ್ ಗಣಪತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನರ ಅನುಕೂಲಕ್ಕಾಗಿ 4 ಕೋಟಿ ರೂ.ವೆಚ್ಚ
  • ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿಕೆ
ವಿರಾಜಪೇಟೆ: ಗೋಣಿಕೊಪ್ಪ ಭಾಗದ ಜನರ ಅನುಕೂಲಕ್ಕಾಗಿ ಆಧುನಿಕ ಬಸ್ ನಿಲ್ದಾಣ ನಿರ್ಮಿಸಿದ್ದು, ಬಳಕೆಗೆ ಮುಕ್ತವಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಗೋಣಿಕೊಪ್ಪ ಪಟ್ಟಣದಲ್ಲಿ 4 ಕೋಟಿ ರೂ.ಅನುದಾನದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಹತ್ತು ವರ್ಷಗಳಿಂದ ಈ ಭಾಗದ ಜನರಿಗೆ ಬಸ್ ನಿಲ್ದಾಣವಿಲ್ಲದೆ ತೊಂದರೆಯಾಗುತ್ತಿತ್ತು. ಸುಸಜ್ಜಿತ ಬಸ್ ನಿಲ್ದಾಣ ಬೇಕೆಂಬ ಕೂಗು ಇದ್ದರೂ ಕಾರಣಾಂತರಗಳಿಂದ ಬಸ್ ನಿಲ್ದಾಣ ನಿರ್ಮಾಣ ಆಗಿರಲಿಲ್ಲ. ಹಾಗಾಗಿ ಈ ಭಾಗದ ಜನರ ಬಹು ನಿರೀಕ್ಷಿತ ಬೇಡಿಕೆಯ ಅತ್ಯಾಧುನಿಕ ಬಸ್ ನಿಲ್ದಾಣವನ್ನು ಇದೀಗ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ ಎಂದು ತಿಳಿಸಿದರು.
ಎರಡು ಕೋಟಿ ರೂ.ವೆಚ್ಚದಲ್ಲಿ ಮೊದಲ ಹಂತದಲ್ಲಿ ಒಂದು ಕೋಟಿ, ಎರಡನೇ ಹಂತದಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದೀಗ 4 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಅಲ್ಲದೆ ಕೊಡಗಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊಳ್ಳಿಮಾಡ ಸಿ.ಕರುಂಬಯ್ಯ ಹೆಸರು ಉಳಿಸಲು ಹಾಗೂ ಮುಂದಿನ ಪೀಳಿಗೆಗೆ ಅವರ ತ್ಯಾಗ ಪರಿಚಯವಾಗಲಿ ಎಂಬ ಉದ್ದೇಶದಿಂದ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಸಿ.ಕರುಂಬಯ್ಯ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿದರು. ಇದರೊಂದಿಗೆ ಬಸ್ ನಿಲ್ದಾಣದ ಒಳಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಕೊಡಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಗಾಂಧಿ ಎಂದೇ ಪ್ರಸಿದ್ಧರಾದ ಪಂದ್ಯಂಡ ಬೆಳ್ಳಿಯಪ್ಪ ಪುತ್ಥಳಿ ಸ್ಥಾಪಿಸಲಾಗಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ತತ್ವ, ಸಿದ್ಧಾಂತ ಅರಿತು ಅವುಗಳನ್ನು ಮೈಗೂಡಿಸಿಕೊಂಡು ಬಾಳಬೇಕು ಎಂದು ಸಲಹೆ ನೀಡಿದರು.
ಕೊಡಗಿನಂಥ ಪುಟ್ಟ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ವಾಸ ಅನುಭವಿಸಿದ ಹಲವು ವೀರರಿದ್ದು ಅವರ ಮಾಹಿತಿ ಯುವ ಸಮುದಾಯಕ್ಕೆ ಪರಿಚಯಿಸಬೇಕಾದ್ದರಿಂದ ಮುಂದಿನ ದಿನಗಳಲ್ಲಿ ಉಳಿದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರಾಧಾನ್ಯ ನೀಡಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡಗು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು .
229 ಫಲಾನುಭವಿಗಳಿಗೆ ಸರ್ಕಾರದಿಂದ ನಿರ್ಮಿಸಿರುವ ಮನೆ ಹಕ್ಕುಪತ್ರ ವಿತರಿಸಲಾಯಿತು. ಗೋಣಿಕೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಮೋದ್ ಗಣಪತಿ, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಬಾಲ ಅಪ್ಪಣ್ಣ , ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರೀರ ನವೀನ್, ಮುಖಂಡರಾದ ಪಿ.ಕೆ.ಪೊನ್ನಪ್ಪ, ಅಜಿತ್ ಅಯ್ಯಪ್ಪ, ವಿಜಯ್ ಗಣಪತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net