ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಂಧನ ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಧರ್ಮಜ ಉತ್ತಪ್ಪ, ವಿ.ಪಿ. ಶಶಿಧರ್, ನಾಪಂಡ ಮುತ್ತಪ್ಪ, ನಟೇಶ್ ಗೌಡ ಮತ್ತಿತರರು ಇದ್ದರು.
ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಂಧನ ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಸಂಜೆ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನೀಟ್ ಪ್ರಶ್ನೆ ಪತ್ರಿಕೆಯ ನಿರಂತರ ಸೋರಿಕೆಯ ಅಕ್ರಮದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ ಅಗ್ರಹಿಸಿ ಆಂದೋಲನ ನಿರತ ವಿದ್ಯಾರ್ಥಿ ಹಾಗೂ ಪೋಷಕರ ವಿರುದ್ದ ಪೈಶಾಚಿಕ ದಾಳಿ ನಡೆಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಬಂಧನಕ್ಕೆ ಒಳಪಡಿಸಿರುವ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿ ಮತ್ತು ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ದೇಶಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಜನತೆ ಆಕ್ರೋಶಭರಿತರಾಗಿದ್ದಾರೆ. ಹಲವು ಹಗರಣಗಳಿಂದ ರೋಸಿಹೋಗಿದ್ದಾರೆ. ಜನವಿರೋಧಿ ಮೋದಿ ಸರ್ಕಾರ ಕಿತ್ತೊಗೆದು
ಜನಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಯನ್ನು ದೇಶದ ಮುಂದಿನ ಪ್ರಧಾನಿಯಾಗಿಸಬೇಕಿದೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮೋದಿ ಸರ್ಕಾರವನ್ನು ಪ್ರಶ್ನಿಸುವವರ, ಹೋರಾಟ, ಚಳವಳಿಗಳನ್ನು ಹಮ್ಮಿಕೊಳ್ಳುವವರಿಗೆ ಒಂದೊAದು ಹಣೆಪಟ್ಟಿ ಕಟ್ಟಿ ಅವರ ಸದ್ದಡಗಿಸುವ ದಮನಕಾರಿ ನೀತಿಯನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ. ಮುಸಲ್ಮಾನರ ವಿರುದ್ಧವಾಗಿ ಹಿಂದೂಗಳನ್ನು ಎತ್ತಿಕಟ್ಟಿ ದೀರ್ಘಾವಧಿಗೆ ದೇಶ ನಡೆಸಬೇಕೆನ್ನುವ ಹುನ್ನಾರ, ಚಿಂತನೆ ಫಲಕೊಡುವುದಿಲ್ಲ ಎಂದರು.
ಪಕ್ಷದ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕುಶಾಲನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಎನ್‌ಎಸ್‌ಯುಐ ನ ಬಸವರಾಜು ಮಾತನಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಸಜಿ, ಜೆ. ಫಿಲೋಮಿನಾ, ಶಶಿ ಭೀಮಯ್ಯ, ಬಿ.ಎಸ್. ಚಂದ್ರಶೇಖರ್, ಕಾಂಗ್ರೆಸ್‌ನ ವಿವಿಧ ಘಟಕ, ಸಮಿತಿಗಳ ಪದಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ನಡೆದ ಪ್ರತಿಭಟನಾ ಮೆರವಣಿಗೆ ಪಟ್ಟಣದ ರಥಬೀದಿ ಮೂಲಕ ಹಳೆ ಮಾರುಕಟ್ಟೆ ರಸ್ತೆ, ಟೌನ್ ಕಾಲೋನಿಗಾಗಿ ಸಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿತು.