ಪ್ರಚಾರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ

ವಿರಾಜಪೇಟೆ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿದರು. ನೆಲ್ಲಿರಾ ಚಲನ್, ಸುವಿನ್ ಗಣಪತಿ ಇತರರಿದ್ದರು.
ವಿರಾಜಪೇಟೆ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿದರು. ನೆಲ್ಲಿರಾ ಚಲನ್, ಸುವಿನ್ ಗಣಪತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಲೇವಡಿ
  • ವಿರಾಜಪೇಟೆ ಮಂಡಲ ಸಂಘಟನಾತ್ಮಕ ಸಭೆ
ಗೋಣಿಕೊಪ್ಪ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆ ಹೊಂದಿದ್ದು, ಪ್ರಚಾರದಲ್ಲಿ ಮಾತ್ರ ಮುನ್ನಡೆ ಗಳಿಸಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಲೇವಡಿ ಮಾಡಿದರು.
ಗೋಣಿಕೊಪ್ಪ ದುರ್ಗಾಬೊಜಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿರಾಜಪೇಟೆ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿ, ಕಳೆದ 20 ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೊಡಗು ಅಭಿವೃದ್ಧಿಯಲ್ಲಿ ಸಮೃದ್ಧಿಯನ್ನು ಕಂಡಿದೆ. ಗ್ರಾಮೀಣ ಪ್ರದೇಶದ ಕಾಲನಿಗಳಿಗೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿಕೊಡಲಾಗಿದೆ. ಶೇಕಡ 90ರಷ್ಟು ಭಾಗ ರಸ್ತೆ ಅಭಿವೃದ್ಧಿ ಕಂಡಿದೆ. ಉಳಿದ ಹತ್ತು ಶೇಕಡವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿರುವ ಕಾಂಗ್ರೆಸ್ ಶಾಸಕರು ಪ್ರಚಾರದ ಅಬ್ಬರದಲ್ಲಿ ತೆಲುತ್ತಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನರೆಡೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ನಿಷ್ಠೆಯಿಂದ ನಿರ್ವಹಿಸಬೇಕಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿಯೇ ನಡೆದಿಲ್ಲ ಎಂಬ ವಿನಾಕಾರಣ ಆರೋಪವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಶುದ್ಧ ಸುಳ್ಳಿನ ಪ್ರಚಾರ ಎಂಬುದು ಪ್ರಜ್ಞಾವಂತ ಜನರಿಗೆ ತಿಳಿದಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪೂರ್ಣ ಮಾಹಿತಿ ಇದೆ. ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಮತ್ತು ಶಾಸಕರನ್ನು ಬಿಜೆಪಿ ಆಹ್ವಾನಿಸುತ್ತಿದೆ ಎಂದರು.
ಸರ್ಕಾರದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದೆ. 200 ಕೋಟಿ ರೂ., ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಬಿಡುಗಡೆ ಮಾಡಿತು. ಆದರೆ, ಇದೀಗ ಆರ್ಥಿಕ ಕುಸಿತದಿಂದ ಅನುದಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ನೆಲ್ಲಿರಾ ಚಲನ್ ಮಾತನಾಡಿ, ಪಕ್ಷ ಸಂಘಟನೆಯಿಂದ ಮತ್ತಷ್ಟು ಸದೃಢವಾಗಬೇಕಾಗಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರೆಡೆಗೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮುಂದಿನ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಲಿಷ್ಠತೆಯನ್ನು ಕಾಣಬೇಕಾಗಿದೆ ಎಂದು ಹೇಳಿದರು.
ವಿರಾಜಪೇಟೆ ಮಂಡಳ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ಜನರಡೆಗೆ ಸಮರ್ಪಕವಾದ ಸೇವೆಯನ್ನು ಬಿಜೆಪಿ ಆಡಳಿತ ನಡೆಸಿದೆ. ಜನರು ಬಿಜೆಪಿಯ ಬಗ್ಗೆ ಉತ್ತಮ ಭರವಸೆಯನ್ನು ಹೊಂದಿದ್ದಾರೆ. ಪಕ್ಷ ಮತ್ತು ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷ ಮುನ್ನಡೆಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಪರಮೇಶ್ವರ, ಮಹಿಳಾ ಮೋರ್ಚಾ ಕಾರ್ಯದರ್ಶಿ ಕಾವ್ಯಾ ಮಧು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ರಜಿತ್ ಕರುಬಯ್ಯ, ರಾಜ್ಯ ಶಿಸ್ತು ಸಮಿತಿ ಸದಸ್ಯ ಪಟ್ಟಡ ರೀನಾ ಪ್ರಕಾಶ್, ದಿಶಾ ಸಮಿತಿ ಸದಸ್ಯೆ ಕಾಂತಿ ಸತೀಶ್ ಸೇರಿದಂತೆ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net