ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಕೊಡಗು ಗುರುತಿಸಿಕೊಂಡಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮಾಂದಲಪಟ್ಟಿಗೆ ಭೇಟಿ ನೀಡದಿದ್ದರೆ ತಮ್ಮ ಪ್ರವಾಸ ಅಪೂರ್ಣ ಎಂದೇ ಭಾವಿಸುತ್ತಾರೆ. ಮಡಿಕೇರಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಮಾಂದಲಪಟ್ಟಿ ಸಮುದ್ರಮಟ್ಟದಿಂದ ಅಂದಾಜು 4 ಸಾವಿರ ಅಡಿ ಎತ್ತರದಲ್ಲಿದೆ. ಹಟ್ಟಿಹೊಳೆ - ಮುಕ್ಕೋಡ್ಲು - ತಂತಿಪಾಲ, ಮಕ್ಕಂದೂರು - ತಂತಿಪಾಲ, ಮಡಿಕೇರಿ-ಹೆಬ್ಬೆಟ್ಟಗೇರಿ-ದೇವಸ್ತೂರು, ಮಡಿಕೇರಿ-ಕೆ.ನಿಡುಗಣೆ-ಕಾಲೂರು ಹೀಗೆ ನಾಲ್ಕು ಮಾರ್ಗಗಳಿಂದ ಮಾಂದಲಪಟ್ಟಿಗೆ ತೆರಳಬಹುದು. ಯಾವ ರಸ್ತೆಯಲ್ಲಿ ಹೋದರೂ ದಾರಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಅವಕಾಶ ಪ್ರವಾಸಿಗರಿಗೆ ಸಿಗುತ್ತದೆ. 2018ರ ಪ್ರಾಕೃತಿಕ ದುರಂತದ ವೇಳೆ ಗುಡ್ಡ ಕುಸಿದು ಆಗಿರುವ ಭೀಕರ ಅನಾಹುತದ ಕುರುಹುಗಳೂ ಕಾಣಲು ಸಿಗುತ್ತದೆ.