ಕಾಡಾನೆಗಳಿಗೆ ಕಾಫಿ ತೋಟಗಳೇ ಆಶ್ರಯತಾಣ

 ಕಾಡಾನೆಗಳನ್ನು ಕಾಫಿ ತೋಟದಿಂದ ಮರಳಿ ಕಾಡಿಗೆ ಓಡಿಸುತ್ತಿರುವುದು
ಕಾಡಾನೆಗಳನ್ನು ಕಾಫಿ ತೋಟದಿಂದ ಮರಳಿ ಕಾಡಿಗೆ ಓಡಿಸುತ್ತಿರುವುದು
Published on
ಮಡಿಕೇರಿ:
ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕಾಫಿ ಎಸ್ಟೇಟ್‌ಗಳನ್ನು ತಮ್ಮ ವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುವ ಆನೆಗಳಿಂದಲೇ ಈ ಸಮಸ್ಯೆ ಜಾಸ್ತಿ ಕಂಡು ಬರುತ್ತಿದೆ. ಕೊಡಗಿನಲ್ಲಿ ಸುಮಾರು 180-200ರಷ್ಟು ಕಾಡಾನೆಗಳು ತೋಟಗಳಲ್ಲಿ ನೆಲೆ ಕಂಡುಕೊAಡಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಯಥೇಚ್ಛ ಆಹಾರ, ನೀರು ಸಿಗುವುದರಿಂದ ಆನೆಗಳನ್ನು ಒಂದು ತೋಟದಿಂದ ಓಡಿಸಲು ಮುಂದಾದರೆ ಮತ್ತೊಂದು ತೋಟದಲ್ಲಿ ಆಶ್ರಯ ಪಡೆಯುತ್ತಾ ತಂಟೆ ಮಾಡುತ್ತಿರುತ್ತವೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊಸದೊಂದು ಪ್ರಬೇಧ ಆನೆಗಳು ಕಂಡು ಬರುತ್ತಿವೆ. ಕಾಫಿ ತೋಟಗಳಲ್ಲಿ ಆಶ್ರಯ ಪಡೆದುಕೊಂಡಿರುವ ಆನೆಗಳು ಇಲ್ಲಿಯೇ ತಮ್ಮ ಸಂತಾನ ಬೆಳೆಸುತ್ತಿದ್ದು ಈ ಆನೆಗಳ ಈಗಿನ ತಲೆಮಾರು ಅರಣ್ಯದ ಕಡೆ ತಲೆಯನ್ನೇ ಹಾಕುತ್ತಿಲ್ಲ. ಕಾಡಿನ ಸಂಬAಧ ಕಡಿದುಕೊಂಡಿರುವ ಈ ಆನೆಗಳಿಗೆ ಕಾಫಿ ತೋಟಗಳೇ ವಾಸ ಸ್ಥಾನಗಳಾಗಿವೆ. ಎಸ್ಟೇಟ್ ಒಳಗೆ ತಿರುಗಾಡುತ್ತಾ, ಇಲ್ಲಿಯೇ ಆಹಾರ, ನೀರು ಸೇವಿಸುತ್ತಾ ಕಾಫಿ ತೋಟದ ಒಳಗೆ ತಮ್ಮ ಸಂತಾನ ಬೆಳೆಸುತ್ತಾ ತೋಟದ ಆನೆಗಳಾಗಿ ರೂಪುಗೊಂಡಿವೆ. ಇದೇ ಕಾರಣಕ್ಕೆ ಆನೆ ಮಾನವ ಸಂಘರ್ಷ ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಮನುಷ್ಯರಿಗೆ ಮಾತ್ರ ಇದರಿಂದಾಗಿ ಹಾನಿ ಆಗುತ್ತಿಲ್ಲ. ಆನೆಗಳ ಅಮೂಲ್ಯ ಪ್ರಾಣವೂ ನಷ್ಟ ಆಗುತ್ತಿದೆ.
2023ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಸಮಗ್ರ ಗಣತಿಯ ಪ್ರಕಾರ ಸುಮಾರು 6,395 ಆನೆಗಳನ್ನು ಹೊಂದಿರುವ ಕರ್ನಾಟಕ ಅತ್ಯಧಿಕ ಆನೆಗಳಿರುವ ರಾಜ್ಯಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೊಡಗಿನ ಅರಣ್ಯ ಪ್ರದೇಶದೊಳಗೆ ಸುಮಾರು 1,103 ಆನೆಗಳಿವೆ ಎಂದು ದಾಖಲಿಸಲಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕೊಡಗಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಆನೆಗಳಿದ್ದು, ಇಲ್ಲಿ ಸುಮಾರು 787 ಆನೆಗಳು ಇರುವ ಬಗ್ಗೆ ಗಣತಿಯಲ್ಲಿ ಮಾಹಿತಿ ಸಿಕ್ಕಿದೆ.
ಕುಶಾಲನಗರದ ಆನೆಕಾಡು ಭಾಗದಲ್ಲಿ ಸುಮಾರು 116 ಆನೆಗಳು ಒಳಗೊಂಡAತೆ ಮಡಿಕೇರಿ ಅರಣ್ಯ ವಿಭಾಗದಲ್ಲಿ 179 ಆನೆಗಳಿದ್ದರೆ, ವಿರಾಜಪೇಟೆ ವಿಭಾಗದಲ್ಲಿ 73 ಆನೆಗಳು ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ 64 ಆನೆಗಳು ಇರುವ ಬಗ್ಗೆ ಲೆಕ್ಕಾಚಾರ ಮಾಡಲಾಗಿದೆ. ಅರಣ್ಯ ಪ್ರದೇಶದೊಳಗಿನ ಗಣತಿಯ ಹೊರತಾಗಿ ಕಾಫಿ ತೋಟಗಳು ಮತ್ತು ಖಾಸಗಿ ಎಸ್ಟೇಟ್‌ಗಳಲ್ಲಿ ಸುಮಾರು 180 ರಿಂದ 200 ಆನೆಗಳು ನೆಲೆಸಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ದಕ್ಷಿಣ ಕೊಡಗಿನ ಕುಟ್ಟ ಮತ್ತು ಶ್ರೀಮಂಗಲ ಭಾಗಗಳಲ್ಲಿ ಕಂಡುಬರುತ್ತವೆ.
2025ರಲ್ಲಿ ಬಿಡುಗಡೆಯಾದ ಕೇಂದ್ರ ಸರ್ಕಾರದ ಡಿಎನ್‌ಎ ಗಣತಿಯ ಹೊಸ ವರದಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 6,013 ಆನೆಗಳಿವೆ. ಕೊಡಗಿನಂತಹ ಹೆಚ್ಚಿನ ಸಾಂದ್ರತೆಯ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಸ್ಥಿರವಾಗಿರುವುದನ್ನು ಈ ಗಣತಿ ಸಾಬೀತುಪಡಿಸಿದೆ. ಕೊಡಗಿನ ಕಾಡು ಮತ್ತು ತೋಟಗಳೆರಡನ್ನೂ ಸೇರಿಸಿದರೆ ಜಿಲ್ಲೆಯಲ್ಲಿ ಸುಮಾರು 1,300 ಕ್ಕೂ ಹೆಚ್ಚು ಆನೆಗಳಿವೆ ಎಂದು ಅಂದಾಜಿಸಬಹುದು. ಈ ತೋಟದ ಆನೆಗಳು ಹೆಚ್ಚು ಓಡಾಡುವುದರಿಂದ ನಿಖರ ಲೆಕ್ಕ ಸಿಗುವುದು ಕಷ್ಟ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಮಳೆ ಕಡಿಮೆಯಾಗಿ ಆನೆಗಳಿಗೆ ಕಾಡಿನೊಳಗೆ ಆಹಾರ ಮತ್ತು ನೀರಿನ ಅಭಾವ ಇರುವ ಕಾರಣದಿಂದ ಆನೆಗಳು ಕಾಫಿ ತೋಟದ ಕಡೆಗೆ ಆಕರ್ಷಿತವಾಗುತ್ತಿವೆ. ಒಮ್ಮೆ ಎಸ್ಟೇಟ್‌ಗಳಲ್ಲಿ ಸಿಗುವ ಆಹಾರದ ರುಚಿ ನೋಡಿದರೆ ಇವುಗಳು ಮತ್ತೆ ಕಾಡಿನ ಕಡೆಗೆ ಮರಳುವ ಮನಸ್ಸು ಮಾಡುವುದಿಲ್ಲ. ಎಸ್ಟೇಟ್‌ಗಳಲ್ಲಿ ಋತುಗಳಿಗೆ ಅನುಗುಣವಾಗಿ ಹಲಸಿನ ಹಣ್ಣು, ಬಾಳೆ ಹಣ್ಣು, ಬಾಳೆ ಗಿಡ, ಬಿದಿರು, ಕಬ್ಬು, ಹುಲ್ಲು ಹೀಗೆ ವೈವಿಧ್ಯಮಯ ಆಹಾರಗಳು ಸಿಗುತ್ತವೆ. ತೋಟದೊಳಗಿನ ಕೆರೆಗಳಲ್ಲಿ ಯಥೇಚ್ಛ ನೀರು ಕೂಡ ಲಭ್ಯವಿರುತ್ತದೆ. ಹಾಗಾಗಿ ಕಾಡಾನೆಗಳು ಎಸ್ಟೇಟ್ ಆನೆಗಳಾಗಿ ಪರಿವರ್ತನೆ ಆಗುತ್ತಿವೆ.
ಕಾಡಾನೆಗಳ ಬಹುತೇಕ ಅಸಹಜ ಸಾವುಗಳು ಎಸ್ಟೇಟ್‌ಗಳಲ್ಲಿ ಸಂಭವಿಸಿರುವುದು ಕೂಡ ಗಮನಾರ್ಹ. ವಿದ್ಯುತ್ ಶಾಕ್, ಗುಂಡೇಟು, ಕೆರೆಗೆ ಬಿದ್ದು.. ಹೀಗೆ ವಿವಿಧ ರೀತಿಯಲ್ಲಿ ಆನೆಗಳು ಕಾಫಿ ತೋಟಗಳಲ್ಲಿ ಮೃತಪಟ್ಟಿವೆ. ಹಾಗೆಯೇ ಮನುಷ್ಯರ ಮೇಲೆ ಹೆಚ್ಚಿನ ಕಾಡಾನೆ ದಾಳಿಗಳು ಕೂಡ ಕಾಫಿ ತೋಟದ ಒಳಗಡೆಯೇ ನಡೆದಿದೆ. ವಿವಿಧ ಕಾರಣಕ್ಕೆ ತೋಟಗಳಿಗೆ ತೆರಳುವ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳಿಗೆ ಬಲಿಯಾಗಿದ್ದಾರೆ. ಕಾಡಾನೆಗಳು ಕಾಫಿ ತೋಟದೊಳಗೆ ಆಶ್ರಯ ಪಡೆಯುತ್ತಿರುವುದು ಆನೆ ಮತ್ತು ಮಾನವ ಇಬ್ಬರ ದೃಷ್ಟಿಯಿಂದಲೂ ಸುರಕ್ಷಿತ ಅಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಫಿ ತೋಟಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಅವುಗಳನ್ನು ಮರಳಿ ಕಾಡಿಗೆ ಅಟ್ಟಲು ಸ್ಥಳೀಯರಿಂದ ಒತ್ತಾಯ ಕೇಳಿ ಬರುತ್ತದೆ. ಈ ಬೆನ್ನಲ್ಲೇ ರಂಗಕ್ಕೆ ಇಳಿಯುವ ಅರಣ್ಯ ಇಲಾಖೆ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುತ್ತದೆ. ಆದರೆ ಕಾಡಿಗೆ ಮರಳದ ಆನೆಗಳು ಸ್ವಲ್ಪ ದೂರದ ಮತ್ತೊಂದು ಎಸ್ಟೇಟ್‌ನಲ್ಲಿ ಆಶ್ರಯ ಪಡೆಯುತ್ತವೆ. ಅಲ್ಲಿಂದ ಓಡಿಸಿದರೆ ಇನ್ನೊಂದು ಎಸ್ಟೇಟ್ ಕಡೆಗೆ ತೆರಳುತ್ತವೆ. ಈ ಸಮಸ್ಯೆಗೆ ಶ್ವಾಶ್ವತ ಪರಿಹಾರ ಕಂಡು ಹುಡುಕಿದರೆ ಮಾತ್ರ ಎಸ್ಟೇಟ್ ಆನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ.
ಆನೆಗಳು ರಕ್ಷಿತ ಅರಣ್ಯದಲ್ಲಿ ಇರುವುದೇ ಆನೆ ಮತ್ತು ಮಾನವನಿಗೆ ಹೆಚ್ಚು ಸುರಕ್ಷಿತ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅರಣ್ಯದಂಚಿನಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ, ಕಂದಕಗಳ ನಿರ್ಮಾಣ, ಸೌರ ಬೇಲಿಗಳು, ಹ್ಯಾಂಗಿAಗ್ ಫೆನ್ಸ್ ಅಳವಡಿಕೆ ಸೇರಿ ಹಲವು ರೀತಿಯಲ್ಲಿ ಆನೆಗಳನ್ನು ಕಾಡಿನೊಳಗೆಯೇ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಆದರೆ ಕಾಡೊಳಗೆ ಆಹಾರ ಮತ್ತು ನೀರಿನ ಕೊರತೆ ಆನೆಗಳನ್ನು ತೋಟದ ಕಡೆಗೆ ಸೆಳೆಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಚಿಸುವ ಅಗತ್ಯವಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಕಾಡಿನಿಂದ ಹೊರಗಡೆ ಬಂದು ತೋಟಗಳಲ್ಲಿ ಬದುಕುತ್ತಿರುವ, ತೋಟದಲ್ಲೇ ಜೀವನ ಮಾಡುತ್ತಿರುವ ಈ ತೋಟದ ಆನೆಗಳಿಂದ ಮಾನವ-ಪ್ರಾಣಿ ಸಂಘರ್ಷ ಬಹಳ ಜಾಸ್ತಿ ಆಗಿದೆ. ಹಾಗಾಗಿ ಇವುಗಳನ್ನು ಸೆರೆ ಹಿಡಿದು ಬೇರೆ ಕಡೆ ಅರಣ್ಯಕ್ಕೆ ಬಿಡುವುದು ಅಥವಾ ಆನೆ ಶಿಬಿರಗಳಲ್ಲಿ ಇಟ್ಟುಕೊಳ್ಳುವ ಕಾರ್ಯ ನಡೆಯುತ್ತಿದೆ. ಆದರೆ ಒಂದು ಆನೆ ಹಿಡಿಯಬೇಕು ಎಂದರೆ ಅದು ಅತ್ಯಂತ ಅಪಾಯಕಾರಿಯಾದ ದೊಡ್ಡ ಮಟ್ಟದ ಕಾರ್ಯಾಚರಣೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕು ಮತ್ತು ಯಾವುದೇ ರೀತಿಯ ಪ್ರಾಣಹಾನಿ ಆಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಇಲಾಖೆ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.
ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net