

ಕಾಫಿ ವಾಣಿಜ್ಯ ಬೆಳೆಯಾಗಿರುವುದರಿಂದ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ರೈತರೇ ಕಾಫಿ ಬೆಳೆÀಯುತ್ತಿದ್ದಾರೆ. ಕಾಫಿ ಒಂದು ಆಹಾರ ಬೆಳೆಯಾಗಿದೆ. ಕಾಫಿ ಕೃಷಿ ಬೆಳೆ ಎಂದು ಘೋಷಣೆಯಾಗಬೇಕು. ಹಾಗಾದಾಗ ಹೆಚ್ಚಿನ ಸೌಲಭ್ಯಗಳನ್ನು ನಿರೀಕ್ಷೆ ಮಾಡಬಹುದು. ಕಾಫಿ ಫಸಲ್ ಭೀಮಾ ವಿಮಾ ಯೋಜನಾ ವ್ಯಾಪ್ತಿಗೆ ಒಳಪಡಬೇಕು.
ಕಾಫಿ ಉತ್ಪಾದನೆ, ವಿದೇಶಿ ವಿನಿಮಯದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರುತ್ತಿದೆ. ಅಕಾಲಿಕ ಮಳೆ, ಅತೀವೃಷ್ಟಿಯಿಂದ ಕಾಫಿ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಷ್ಟೇ ನಷ್ಟವಾದರೂ ಸೂಕ್ತ ಬೆಳೆಹಾನಿ ಪರಿಹಾರ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ, ಕಾಫಿ ತೋಟಗಳೇ ನಾಶವಾಗಲಿವೆ. ಕಾಫಿ ಫಸಲ್ ಭೀಮಾ ಯೋಜನಾ ವ್ಯಾಪ್ತಿಗೆ ಒಳಪಟ್ಟು, ಬೆಳೆವಿಮೆ ಸಿಗುವಂತಾಗಬೇಕು.
ಕೊಡಗಿನಲ್ಲಿ ಅತಿ ಹೆಚ್ಚಾಗಿ ಕಾಫಿ ಬೆಳೆಯುತ್ತಾರೆ. ಆದರೆ ಕಾಫಿ ಬೆಳೆಗಾರರನ್ನು ಫಸಲ್ ಭೀಮಾ ಯೋಜನೆಯಿಂದ ಹೊರಗೆ ಇಟ್ಟಿರುವುದು ದುರಂತ. ಇದರಿಂದ ಕಾಫಿಗೆ ನಷ್ಟವಾದರೆ ವಿಮಾ ಸೌಲಭ್ಯ ಸಿಗುವುದಿಲ್ಲ. ಪ್ರಮುಖವಾಗಿ ಕಾಫಿಗೆ ಈ ಯೋಜನೆ ಬೇಕಿದೆ. ಇನ್ನಾದರೂ ಫಸಲ್ ಭೀಮಾ ಯೋಜನೆಯಿಂದ ಹೊರಗಿಟ್ಟಿರುವ ಕಾಫಿಯನ್ನು ಯೋಜನೆಗೆ ಸೇರಿಸಿ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ.
ಸದ್ಯ ಕಾಫಿಯ ದರ ಹೆಚ್ಚಿದ್ದರೂ ಫಸಲು ಕಡಿಮೆಯಾಗಿದೆ. ಇದೊಂದು ಬಹು - ವಾರ್ಷಿಕ ಬೆಳೆಯಾದರೂ ಅಡಿಕೆ, ತೆಂಗು ಮುಂತಾದ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊಳಪಡಿಸಿ ಕಾಫಿಯನ್ನು ಹೊರಗಿಟ್ಟಿರುವುದು ಬೇಸರದ ವಿಷಯ. ಅದಕ್ಕೂ ಮಿಗಿಲಾಗಿ ಕಾಫಿ ಹವಾಗುಣಕ್ಕೆ ತೀವ್ರತರ ಸಂವೇದನೀಯ ಬೆಳೆ. ಇದಕ್ಕೆ ಫಸಲು ವಿಮೆ ಅಗತ್ಯವಿದೆ.
ಕಾಫಿ ವಾರ್ಷಿಕ ಬೆಳೆಯಾಗಿದ್ದು ಇದಕ್ಕೆ ಸಕಾಲದಲ್ಲಿ ಮಳೆ ಸಿಕ್ಕಿದಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಹೂ ಮಳೆ ಬಾರದಿದ್ದಲ್ಲಿ ಕಾಫಿ ಹೂ ಕರಟಿ ಹೋಗುತ್ತದೆ. ಇತ್ತೀಚೆಗೆ ಕೃಷಿ ಹೊಂಡ ಹೊರತುಪಡಿಸಿ ಹೊಳೆಗಳಿಂದ ನೀರು ಹಾಯಿಸಲು ಸರ್ಕಾರ ನಿರ್ಬಂಧ ಹೇರುತ್ತಿರುವುದರಿಂದ ಸಾಮಾನ್ಯವಾಗಿ ಸಣ್ಣ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗುತ್ತಿದೆ. ಈ ವರ್ಷವಂತೂ ವರ್ಷಪೂರ್ತಿ ಮಳೆಯಿಂದ ಕಾಫಿ ಫಸಲು ನಷ್ಟದಿಂದ ಕಾಫಿ ಬೆಳೆಗಾರರು ಗಗನದತ್ತ ಮುಖ ಮಾಡಿದ್ದಾರೆ. ಇತರ ಬೆಳೆಗಳಂತೆ ಕಾಫಿ ಬೆಳೆಯನ್ನು ಫಸಲು ಭೀಮಾ ಯೋಜನೆಗೆ ಅಳವಡಿಸಿದಲ್ಲಿ ಕಾಫಿ ಬೆಳೆಗಾರರು ಕೊಂಚ ಸುಧಾರಿಸಿಕೊಳ್ಳಬಹುದು.
ಕಾಫಿ ವಾಣಿಜ್ಯ ಬೆಳೆ ಆಗಿರುವ ಕಾರಣ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬರುವುದಿಲ್ಲ. ಈ ಮೊದಲು 2008ರಲ್ಲಿ ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ಕಾಫಿಯನ್ನು ಸೇರಿಸಲಾಗಿತ್ತು. 2014ರ ತನಕವೂ ಈ ಯೋಜನೆ ಇತ್ತು. 2017ರ ತನಕ ಭಾಗಶಃ ಜಾರಿಯಲ್ಲಿತ್ತು. ನಂತರ ಇದನ್ನು ತೆಗೆಯಲಾಗಿದೆ. ಇದೀಗ ಮತ್ತೆ ಹವಾಮಾನ ಆಧಾರಿತ ವಿಮಾ ಯೋಜನೆಗೆ ಕಾಫಿಯನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಆದಷ್ಟು ಶೀಘ್ರ ಇದು ಜಾರಿಗೆ ಬರುವ ವಿಶ್ವಾಸ ಇದೆ.