ಸೋಮವಾರಪೇಟೆ ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಮಾತನಾಡಿದರು. ನೇತ್ರಾವತಿ, ಸುರೇಶ್, ಮೊಗಪ್ಪ, ಶಿವಪ್ರಕಾಶ್ ಇದ್ದರು.
ಸೋಮವಾರಪೇಟೆ : ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1.23 ಕೋಟಿ ರೂ.
ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಹೇಳಿದರು.
ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 2,791 ಸದಸ್ಯರಿದ್ದಾರೆ. 2026-27ನೇ ಸಾಲಿಗೆ 53.94 ಕೋಟಿ ರೂ. ಸಾಲ ನೀಡಲಾಗಿದೆ. ಮರುಪಾವತಿ ಉತ್ತಮವಾಗಿದ್ದು, ಸಂಘ ಪ್ರಗತಿಯತ್ತ ಸಾಗುತ್ತಿದೆ ಎಂದು ವಿವರಿಸಿದರು.
2024-25ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ನಮ್ಮ ಸಂಘಕ್ಕೆ ಕೇಂದ್ರ ಬ್ಯಾಂಕ್‌ನಿಂದ ತೃತೀಯ ಬಹುಮಾನ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕೆಸಿಸಿ ಸಾಲ ಪಡೆದ ಸದಸ್ಯರು ತಮ್ಮ ಸ್ವಾಧೀನಕ್ಕೆ ಸೇರಿದ ಆರ್‌ಟಿಸಿಯಲ್ಲಿ ಜಂಟಿ ಹೆಸರುಗಳು ಇದ್ದರೆ ಅವುಗಳನ್ನು ತೆಗೆದು ಹಾಕಿಸಬೇಕು. ಸಿಂಗಲ್ ಆರ್‌ಟಿಸಿ ಯಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಆಗ ಕೆಸಿಸಿ ಸಾಲ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಹೇಳಿದರು.
ಸಂಘದ ಸದಸ್ಯರಾದ ಕೆ.ಬಿ.ಚಂದ್ರಶೇಖರ್, ಕೆ.ಕೆ.ಖುಶ್ವಂತ್, ದೇವರಾಜ್, ಶುಂಠಿ ಕುಮಾರ್, ಕೆ.ಪಿ.ಕೊಮಾರಪ್ಪ, ಬಿ.ಎಂ.ಸುರೇಶ್ ಮತ್ತಿತರರು ಸಂಘದ ಅಭಿವೃದ್ಧಿ
ಬಗ್ಗೆ ಮಾತನಾಡಿದರು.
ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗುವ ಅನಾಹುತಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಸಭೆ ನಿರ್ಣಯಿಸಿತು.
ಸಂಘದ ನೂತನ ಕಟ್ಟಡದ ಮುಂದುವರಿದ ಕಾಮಗಾರಿಗೆ ಮಹಾಸಭೆ ಒಪ್ಪಿಗೆ ನೀಡಿತು. ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರೋತ್ಸಾಹ ಧನ ಸಹಿತ ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಎಚ್.ಎಸ್.ನೇತ್ರಾವತಿ, ಎಚ್.ಆರ್.ಸುರೇಶ್, ಬಿ.ಪಿ.ಮೊಗಪ್ಪ. ಕೆ.ಕೆ. ಶಿವಪ್ರಕಾಶ್, ಹೆಗ್ಗುಳ ಹೂವಯ್ಯ, ಎ.ಎಸ್.ನವೀನ್ ಕುಮಾರ್, ಜಿ.ಎಸ್.ನಾಗರಾಜು, ಕೆ.ಜಿ.ದಿನೇಶ್, ಸುನಿತಾ ಚಂದ್ರಪ್ಪ, ಜಿ.ಬಿ.ಗಿರೀಶ್, ಕೆ.ಎಲ್.ರಕ್ಷಿತ್, ಸಿಇಒ ಕಿರಣ್ ಇದ್ದರು.