ಪ್ರವಾಸಿ ತಾಣಗಳ ಸ್ವಚ್ಛತೆ ಎಲ್ಲರ ಜವಾಬ್ದಾರಿ

ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಚೋಮಕುಂದು ಬೆಟ್ಟದಲ್ಲಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.
ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಚೋಮಕುಂದು ಬೆಟ್ಟದಲ್ಲಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಯಂ ಸೇವಕ ಅಪ್ಪಾರಂಡ ಸಾಗರ್ ಹೇಳಿಕೆ
ನಾಪೋಕ್ಲು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಚೋಮಕುಂದು ಬೆಟ್ಟದಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಯಿತು.
ಈ ವ್ಯಾಪ್ತಿಯ ವಿವಿಧ ಹೋಂಸ್ಟೇ ಮಾಲೀಕರು, ಸ್ಥಳೀಯರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ವಯಂಸೇವಕರು ಪ್ರವಾಸಿ ತಾಣಗಳ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಜಲಪಾತ ಹಾಗೂ ಬೆಟ್ಟಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
ಸ್ವಯಂ ಸೇವಕ ಅಪ್ಪಾರಂಡ ಸಾಗರ್ ಮಾತನಾಡಿ, ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಸುಂದರ ಕೊಡಗು ಸ್ವಚ್ಛ ಕೊಡಗು ಆಗಬೇಕಿದೆ. ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಸ್ಥಳ ಮಾಲಿನ್ಯ ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯರು ಕೂಡ ಪರಿಸರ ಮಾಲಿನ್ಯಕ್ಕೆ ಕಾರಣಕರ್ತರಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಈ ಪರಿಸರವನ್ನು ಸ್ವಚ್ಛಗೊಳಿಸ ಲಾಗಿದೆ. ಪರಿಸರ ಸ್ವಚ್ಛತೆಯತ್ತ ಎಲ್ಲರೂ ಗಮನ ಹರಿಸಬೇಕು ಎಂದರು.
ಚೇಲಾವರ ಜಲಪಾತ ವೀಕ್ಷಣೆಗೆ ಸುಂದರ ತಾಣವಾಗಿದ್ದು ಅಪಾಯಕಾರಿ ಸ್ಥಳವೂ ಹೌದು. ಅಪಾಯದ ಮುನ್ಸೂಚನೆಯನ್ನೂ ಲೆಕ್ಕಿಸದೆ ಈಜಲು ತೆರಳಿ ಹಲವು ಯುವಕರು ಪ್ರಾಣ ತೆತ್ತಿದ್ದಾರೆ. ಯುವಕರು ಅಪಾಯಕ್ಕೆ ಮೈಯೊಡ್ಡಿಕೊಳ್ಳುವುದಲ್ಲದೆ ನೀರು ಮಾಲಿನ್ಯಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಜಲಪಾತದ ಬಳಿಗೆ ತೆರಳದಂತೆ ಬೇಲಿ ಅಳವಡಿಸಲಾಗಿತ್ತು ಆದರೆ ಇತ್ತೀಚಿಗೆ ಕೆಲವರು ಬೇಲಿಯನ್ನು ಮುರಿದು ಜಲಪಾತದ ಸನಿಹಕ್ಕೆ ತೆರಳುತ್ತಿದ್ದಾರೆ ಎಂದರು.
ಸ್ವಯಂಸೇವಕರಾದ ನಡಿಕೇರಿಯಂಡ ದಿಲೀಪ್, ಮಣಿಯಪಂಡ ಧೀರಜ್ ಸೇರಿದಂತೆ ಗ್ರಾಮಸ್ಥರು, ಸ್ವಯಂಸೇವಕರು ಪಾಲ್ಗೊಂಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಸ್ವಚ್ಛತಾ ಕಾರ್ಯದಲ್ಲಿ 500ಕ್ಕೂ ಹೆಚ್ಚು ಮದ್ಯ ಹಾಗೂ ಬಿಯರ್ ಬಾಟಲಿ ಸೇರಿದಂತೆ ಸುಮಾರು ಒಂದು ಟನ್‌ನಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net