ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಹಕ್ಕುಗಳ ಮಹತ್ವವನ್ನು ಪಾಲಕರು ಅರಿತುಕೊಳ್ಳಬೇಕು. ಮಕ್ಕಳು ಸಮಾಜದಲ್ಲಿ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಪ್ರೀತಿಯಿಂದ ಬೆಳೆವ ಹಕ್ಕುಗಳಿವೆ ಎಂದು ಹೇಳಿದರು. ಪಾಲಕರು ಮಕ್ಕಳ ಮೊದಲ ಗುರುಗಳು. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದು, ಅವರ ಆಸಕ್ತಿ-ಪ್ರತಿಭೆಯನ್ನು ಉತ್ತೇಜಿಸುವುದು, ಭಯವಿಲ್ಲದ ವಾತಾವರಣದಲ್ಲಿ ಬೆಳೆಯಲು ಸಹಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ. ಮಕ್ಕಳನ್ನು ಅನವಶ್ಯಕವಾಗಿ ಬೈಯುವುದು ಸರಿಯಾದ ಕ್ರಮವಲ್ಲ. ಮಕ್ಕಳ ಮಾತುಗಳನ್ನು ಆಲಿಸಿ, ಅವರಿಗೆ ಸಮಯ ನೀಡುವುದು, ಪ್ರೀತಿ ಮತ್ತು ಕಾಳಜಿಯಿಂದ ಮಾರ್ಗದರ್ಶನ ಮಾಡುವುದು ಅತ್ಯಂತ ಅಗತ್ಯವೆಂದು ಸುಮನಾ ಒತ್ತಿ ಹೇಳಿದರು.