ಜೂನಿಯರ್ ಕಾಲೇಜು ಆವರಣದಲ್ಲಿ ಮಕ್ಕಳ ಸಂತೆ

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಹಣ್ಣುಹಂಪಲುಗಳನ್ನು ಮಾರಾಟ ಮಾಡಿದರು.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಹಣ್ಣುಹಂಪಲುಗಳನ್ನು ಮಾರಾಟ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂನಿಯರ್ ಕಾಲೇಜು ಆವರಣದಲ್ಲಿ ಮಕ್ಕಳ ಸಂತೆ
ಮಡಿಕೇರಿ: ಎತ್ತ ನೋಡಿದರೂ ವಿವಿಧ ಬಗೆಯ ಸೊಪ್ಪು, ತರಕಾರಿ, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ಪಾನಿಪೂರಿ, ಮಸಾಲೆ ಪುರಿ, ಚುರುಮುರಿ, ಚಿಕನ್ ಬಿರಿಯಾನಿ ಮಾರಾಟ ಬಲು ಜೋರಾಗಿ ಸಾಗಿತು.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯ. ಸುಮಾರು ೭೦ಕ್ಕೂ ಹೆಚ್ಚು ಮಕ್ಕಳು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಗಣಿಕೆ ಸೊಪ್ಪು, ನೊಗ್ಗೆ, ಕೊತ್ತಂಬರಿ, ಕರಿಬೇವು, ಬಸಳೆ, ಪಾಲಕ್ ಸೊಪ್ಪು, ಟೊಮೆಟೋ, ಕೆಸ, ಹಲಸು, ಬಾಳೆಕಾಯಿ, ಬಾಳೆಹಣ್ಣು, ಸಪೋಟ, ಕಿತ್ತಳೆ, ಚಕೋತ, ಮೂಲಂಗಿ, ನಿಂಬೆಹಣ್ಣು, ಸಿಹಿಗೆಣಸು, ಕಲ್ಲಂಗಡಿ, ಬದನೆ, ಪರಂಗಿ ಹಣ್ಣು, ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ, ಜತೆಗೆ ಮಹಿಳೆಯರ ಸೀರೆ ಒಳಗೊಂಡಂತೆ ಪ್ಯಾನ್ಸಿ ವಸ್ತುಗಳು ಹಲವು ವಿಭಾಗದಲ್ಲಿ ಮಕ್ಕಳ ಸಂತೆ ಏರ್ಪಡಿಸಿದ್ದು, ವಿಶೇಷ ಆಕರ್ಷಣೀಯವಾಗಿತ್ತು.
ಬನ್ನಿ ಸಾರ್, ಬನ್ನಿ ಸಾರ್, ೧೦ ರೂ., ೨೦ ರೂ. ೩೦ ರೂ. ಬನ್ನಿ ಸಾರ್ ಸಂತೆ ವ್ಯಾಪಾರ ಮಾಡಿ ಎಂದು ವಿದ್ಯಾರ್ಥಿಗಳು ಆಹ್ವಾನಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ವಿದ್ಯಾರ್ಥಿಗಳ ವ್ಯಾಪಾರಕ್ಕೆ ಪೋಷಕರು ಸಹ ಸಾಥ್ ನೀಡಿದ್ದು ಎದ್ದು ಕಂಡಿತು.
ಮಕ್ಕಳ ಸಂತೆಯಲ್ಲಿ ಚುರುಮುರಿ ಮತ್ತು ಪ್ರೆಶ್ ಜ್ಯೂಸ್ ಸವಿಯುತ್ತಿದ್ದುದ್ದು ಹೆಚ್ಚಾಗಿ ಕಂಡು ಬಂದಿತು. ತರಕಾರಿ ಮತ್ತು ವಿವಿಧ ಬಗೆಯ ಹಣ್ಣುಗಳನ್ನು ಮನೆಗೆ ಕೊಂಡೊಯ್ಯುವುದು ಕಂಡು ಬಂದಿತು. ನಗರದ ಪಿ.ಎಂ.ಶ್ರೀ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಇದೇ ಮೊದಲ ಬಾರಿಗೆ ಶಾಲೆ ಆವರಣದಲ್ಲಿ ಮಕ್ಕಳ ಸಂತೆ ನಡೆಸಿದ್ದು, ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ವಿದ್ಯಾರ್ಥಿಗಳ ಆರ್ಥಿಕ ಸಾಕ್ಷರತಾ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಆರ್ಥಿಕ, ವಾಣಿಜ್ಯ, ವ್ಯಾಪಾರದ ಮಹತ್ವ ಅರಿವು ಮೂಡಿಸುವಲ್ಲಿ ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಪ್ರತಿನಿತ್ಯ ಕುಟುಂಬಕ್ಕೆ ಬೇಕಿರುವ ಪದಾರ್ಥಗಳನ್ನು ಕೊಳ್ಳುವಲ್ಲಿ ಹಣದ ಉಳಿತಾಯ ಯೋಜನೆ ಬಗ್ಗೆ ಮಕ್ಕಳ ಸಂತೆ ಉತ್ಸಾಹದಾಯಕವಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸೌಮ್ಯ ಪೊನ್ನಪ್ಪ, ವಿಷಯ ಪರಿವೀಕ್ಷಕಿ ಬಿಂದು, ಶರ್ಮಿಳಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಟಿ.ಭವಾನಿ, ಎಸ್.ಡಿಎಂ.ಸಿ ಅಧ್ಯಕ್ಷ ಜಗದೀಶ್, ಶಿಕ್ಷಕರಾದ ಜಯಮ್ಮ, ಮೋಹನ್ ಕುಮಾರಿ, ಶೃತಿ, ಕವಿತಾ, ಸಂದೇಶ್, ಮಮತ, ಹಾಜಿರಾ ಬೇಗಂ, ಸಿ.ಸಿ.ಮ್ಯಾಥ್ಯೂ, ಶೃತಿಶ್ರೀ, ಮಂಜುಳ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net