ಮಡಿಕೇರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಿನಾಚರಣೆ

ಮಡಿಕೇರಿ ಪುಟಾಣಿ ನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಪ್ರಸನ್ನ ಕುಮಾರ್, ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಕ್ಕಳು, ಪೋಷಕರು ಇದ್ದರು.
ಮಡಿಕೇರಿ ಪುಟಾಣಿ ನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಪ್ರಸನ್ನ ಕುಮಾರ್, ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಕ್ಕಳು, ಪೋಷಕರು ಇದ್ದರು.
Published on
ಮಡಿಕೇರಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳಲ್ಲಿ ಶುಕ್ರವಾರ ಮಕ್ಕಳ ದಿನ ಆಚರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ದಾಸವಾಳ ಅಂಗನವಾಡಿ ಕೇಂದ್ರ, ಮಹದೇವಪೇಟೆ ಅಂಗನವಾಡಿ ಕೇಂದ್ರ, ಪುಟಾಣಿ ನಗರ ಅಂಗನವಾಡಿ ಕೇಂದ್ರ, ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಛದ್ಮವೇಷ, ನೃತ್ಯಗಳನ್ನು ನೋಡಿ ಪ್ರೋತ್ಸಾಹಿಸಿ ಬಹುಮಾನ ವಿತರಿಸಿದರು.
ನಾಲ್ಕು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರಾದ ಸುಜಾತ, ಗೀತಾ, ಶೃತಿ, ಉಮಾವತಿ, ಸಹಾಯಕಿಯರಾದ ಅನಿತಾ, ದೈವಾಣಿ, ಇಂದ್ರಮ್ಮ, ಶ್ಯಾಮಲ ಸಮುದಾಯದ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಮಾತನಾಡಿದ ಪ್ರಸನ್ನ ಕುಮಾರ್ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ನ. 14 ರಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು, ಮಕ್ಕಳ ಆರೈಕೆ, ಹಕ್ಕು ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಆಲೋಚನೆಯನ್ನು ಮಾಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು, ಶಿಕ್ಷಕರೊಂದಿಗೆ ಸಮುದಾಯದ ಪ್ರತಿಯೊಬ್ಬರೂ ಸಹಕರಿಸಬೇಕು.
ಮಕ್ಕಳ ಶಿಕ್ಷಣಕ್ಕೆ ಪೋಷಕರು, ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭವಾಗಿರುವ ಮಾಂಟೆನ್ಸರಿ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡದೊಂದಿಗೆ ಇಂಗ್ಲಿಷ್ ಕಲಿಸಲು ಸಹಕರಿಸಬೇಕೆಂದರು.
ಸವಿತಾ ಕೀರ್ತನ್ ಮಾತನಾಡಿ ಎಲ್ಲಾ ಪೋಷಕರು ತಮ್ಮ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ದಾನಿಗಳ ಸಹಕಾರವನ್ನು ಪಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸಹಕರಿಸಬೇಕು. ತಮ್ಮ ತಮ್ಮ ಮಕ್ಕಳನ್ನು ಜಂಕ್ ಫುಡ್, ಮೊಬೈಲ್‌ಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಕಲಾವೇದಿಕೆಯ ಅಧ್ಯಕ್ಷರು ಮಹೇಶ್ ಮಾತನಾಡಿದರು. ನಗರಸಭೆ ಆಯುಕ್ತ ರಮೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರಾಘವೇಂದ್ರ ದೇವಸ್ಥಾನದ ಅಂಗನವಾಡಿ ಕೇಂದ್ರದಲ್ಲಿ ಐದು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net