ಗೋಣಿಕೊಪ್ಪಲು ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ದೈಹಿಕ ಕ್ಷಮತೆ ಉತ್ತಮವಾಗಿದ್ದರೆ ಸಾಧನೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ತರಬೇತಿಯಿಂದ ಪಡೆದ ಕೌಶಲ್ಯವನ್ನು ಕ್ರೀಡೆಯಲ್ಲಿ ಬಳಸಿಕೊಂಡು ವೃತ್ತಿಜೀವನದಲ್ಲೂ ಸಾಧನೆ ಮಾಡಲು ಸಾಧ್ಯ. ಕ್ರೀಡೆಯೊಂದಿಗೆ ಮುನ್ನಡೆಯುವ ಹವ್ಯಾಸವನ್ನು ಯುವಕರು ಬೆಳೆಸಿಕೊಳ್ಳಬೇಕು. ಬಿ.ಬಿ.ಸಿ. ಕ್ಲಬ್ ಮೂಲಕ ಸಾವಿರಾರು ಕ್ರೀಡಾಪಟುಗಳು ತಮ್ಮ ಭವಿಷ್ಯ ನಿರ್ಮಿಸಿಕೊಂಡಿದ್ದಾರೆ. ಕ್ರೀಡಾಭಿಮನಿಗಳು, ಕ್ರೀಡಾ ಪ್ರೇಮಿಗಳು ಹಾಗೂ ದಾನಿಗಳ ಸಹಕಾರದಿಂದ ಈ ಶಿಬಿರ ಯಶಸ್ಸು ಕಂಡಿದ್ದು, ಹಿರಿಯ ಬಾಸ್ಕೆಟ್ ಬಾಲ್ ಪಟು ಪಳಂಗAಡ ವಾಣಿ ಚಂಗಪ ತಮಗೆ ಸಿಕ್ಕ ಅವಕಾಶ ಮಕ್ಕಳಿಗೂ ಸಿಗಲಿ ಎಂಬ ಉದ್ದೇಶದಿಂದ ಮತ್ತು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಶಿಬಿರವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶಿಬಿರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೌಶಲ್ಯಗಳನ್ನು ಕಲಿಸಿಕೊಡುವ ಮೂಲಕ, ಆಟಗಾರರಿಗೆ ಉತ್ತಮ ತರಬೇತಿ ನೀಡಲಾಗಿದೆ. ಮಕ್ಕಳು ಶಿಸ್ತು, ಸಂಯಮ, ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಬೇಕು ಎಂದರು.