ಚಿಕ್ಲಿಹೊಳೆ ಆಟಕ್ಕುಂಟು ಲೆಕ್ಕಕ್ಕಿಲ್ಲ

ಭರ್ತಿ ಆಗಿ ಕೋಡಿ ಬೀಳುತ್ತಿರುವ ಚಿಕ್ಲಿಹೊಳೆ ಜಲಾಶಯ
ಭರ್ತಿ ಆಗಿ ಕೋಡಿ ಬೀಳುತ್ತಿರುವ ಚಿಕ್ಲಿಹೊಳೆ ಜಲಾಶಯ
Published on
ಮಡಿಕೇರಿ:
ಮಹತ್ವದ ಉದ್ದೇಶದಿಂದ ನಿರ್ಮಾಣ ಆದ ಚಿಕ್ಲಿಹೊಳೆ ಜಲಾಶಯದಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಭತ್ತ ಬೆಳೆಯಲು ಸಕಾಲದಲ್ಲಿ ನೀರು ಒದಗಿಸದ ಕಾರಣ ಅನ್ನದಾತರು ವ್ಯವಸಾಯದಿಂದಲೇ ವಿಮುಖರಾಗುತ್ತಿದ್ದಾರೆ. ಅಣೆಕಟ್ಟೆಯ ನಿರ್ವಹಣೆಗೆ ಬರುವ ಅನುದಾನ ತೀರಾ ಕಡಿಮೆ ಇದ್ದು ನಾಲೆಗಳು ಪಾಳು ಬೀಳುಬಿದ್ದಿವೆ. ದೊಡ್ಡ ನಿರೀಕ್ಷೆ ಇಟ್ಟುಕೊಂಡು ಯೋಜನೆಗೆ ಜಮೀನು ಬಿಟ್ಟುಕೊಟ್ಟಿದ್ದವರು ಈಗ ಪಶ್ಚಾತಾಪ ಪಡುತ್ತಿದ್ದಾರೆ.
ಕಾವೇರಿ ಕಣಿವೆಯ ಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿ ಅಗಿದ್ದರೂ ರೈತರ ಪಾಲಿಗೆ ನಿರುಪಯುಕ್ತವಾಗಿದೆ. ರಂಗಸಮುದ್ರ, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಹೊಸೂರು, ಗೊಂದಿಬಸವನಹಳ್ಳಿ ವ್ಯಾಪ್ತಿಯ 2,137 ಎಕರೆ ಜಮೀನಿಗೆ ನೀರೊದಗಿಸುವ ಉz್ದೆÃಶದಿಂದ 1977-79ರ ಅವಧಿಯಲ್ಲಿ ಚಿಕ್ಲಿಹೊಳೆ ಜಲಾಶಯ ನಿರ್ಮಿಸಲಾಯಿತು. ರಂಗಸಮುದ್ರದಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ 464.8 ಮೀ. ಉದ್ದವಿದ್ದು. 25.3 ಮೀ. ಎತ್ತರ ಹೊಂದಿದೆ. ಅರ್ಧ ಟಿಎಂಸಿ ನೀರು ಸಂಗ್ರಹಿಸಬಹುದಾದ ಅಣೆಕಟ್ಟೆಯನ್ನು ಮಣ್ಣು ಮತ್ತು ಕಲ್ಲಿನಿಂದಲೇ ಕಟ್ಟಿರುವುದು ವಿಶೇಷ.
ಚಿಕ್ಲಿಹೊಳೆ ತುಂಬಿದಾಗ ಹೊರಹರಿಯುವ ನೀರು ಕಾವೇರಿ ನದಿಯನ್ನು ಸೇರುತ್ತದೆ. ಕÊಷಿ ಉz್ದÉÃಶಕ್ಕಾಗಿ ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದ್ದರೂ ಇದರ ಗರಿಷ್ಠ ಉಪಯೋಗ ಕೃಷಿಕರಿಗೆ ಆಗುತ್ತಿಲ್ಲ. 1982ರಲ್ಲಿ ಜಲಾಶಯ ಅಧಿಕÊತವಾಗಿ ಕಾರ್ಯಾರಂಭ ಮಾಡಿದೆ. ಆದರೆ ಇಲ್ಲಿಯ ತನಕ ನಿಗದಿತ ಪ್ರದೇಶಕ್ಕೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಾವೇರಿ ನೀರಾವರಿ ನಿಗಮದ ಪಾಲಿಗೆ ಈ ಜಲಾಶಯ ಬಿಳಿಯಾನೆಯಂತಾಗಿದೆ ಎನ್ನುವುದು ಸಾಮಾನ್ಯ ಆರೋಪ.
ಕಾಲುವೆಗಳ ನಿರ್ವಹಣೆಯಲ್ಲಿ ದಿವ್ಯ ನಿರ್ಲಕ್ಷö್ಯ ತೋರಿಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಹಾಗಾಗಿ ಜಲಾಶಯದ ತಳದಲ್ಲಿ ಇರುವ ರಂಗಸಮುದ್ರ ಗ್ರಾಮದ ಜಮೀನುಗಳಿಗೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಚಿಕ್ಲಿಹೊಳೆಗೆ ಸಂಬAಧಿಸಿದ ಕಚೇರಿಗಳು ರಂಗಸಮುದ್ರದಲ್ಲೇ ಇದ್ದಾಗ ಅಣೆಕಟ್ಟೆ ನಿರ್ವಹಣೆ ಸ್ವಲ್ಪಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ 2 ದಶಕಗಳ ಹಿಂದೆ ಇಲ್ಲಿನ ಆಡಳಿತವನ್ನು ಹಾರಂಗಿ ಯೋಜನೆ ಜತೆ ವಿಲೀನ ಮಾಡಲಾಗಿದ್ದು, ಕಚೇರಿ ಕಟ್ಟಡಗಳು ಪಾಳುಬಿದ್ದವೆ. ಉಸ್ತುವಾರಿ ಹೊತ್ತ ಅಧಿಕಾರಿಗಳು ಕುಶಾಲನಗರ ಸೇರಿಕೊಂಡ ಮೇಲೆ ಜಲಾಶಯ ಅನಾಥವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಚಿಕ್ಲಿಹೊಳೆ ಜಲಾಶಯ ಯೋಜನೆಯ ಹಳೆಯ ಎಡದಂಡೆ ನಾಲೆ ನಂಜರಾಯಪಟ್ಟಣ ವ್ಯಾಪ್ತಿಗೆ ಒಳಪಟ್ಟರೆ, ಬಲದಂಡೆಯ ಹಳೆಯ ನಾಲೆ ಜತೆಯಲ್ಲಿ ಹೊಸದಾಗಿ ಸುಮಾರು 22 ಕಿ.ಮೀ ಹೊಸ ನಾಲೆ ನಿರ್ಮಾಣ ಮಾಡಲಾಗಿತ್ತು. ಭತ್ತ ಬೆಳೆಯಲು ರೈತರ ಗದ್ದೆಗಳಿಗೆ ನೀರು ಕೊಡುವುದು ಇದರ ಪ್ರಮುಖ ಉದ್ದೇಶ ಆಗಿದ್ದರೂ ಇಲಾಖೆ ಇದನ್ನು ಮರೆತಂತಿದೆ. ಹಾಗಾಗಿ ಇಲ್ಲಿಯ ರೈತರು ಭತ್ತ ಬೆಳೆಯುವುದನ್ನು ಬಿಟ್ಟು ಇತ್ತೀಚಿನ ದಿನಗಳಲ್ಲಿ ಗದ್ದೆಗಳಲ್ಲಿ ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಉಳಿದಂತೆ ಜಲಾಶಯ ವ್ಯಾಪ್ತಿಗೆ ಬರುವ ನೂರಾರು ಎಕರೆ ಗದ್ದೆಯ ಪ್ರದೇಶ ಪಾಳು ಬಿದ್ದಿವೆ. ವಸತಿ ಪ್ರದೇಶಗಳೂ ತಲೆಯೆತ್ತಿವೆ.
ಭತ್ತ ಬೇಸಾಯ ಬಿಡಬಾರದು ಎನ್ನುವ ಛಲ ಇಟ್ಟುಕೊಂಡಿರುವ ಕೆಲವು ರೈತರು ಶ್ರಮವಹಿಸಿ ವ್ಯವಸಾಯಕ್ಕೆ ಮುಂದಾದರೂ ಕಾವೇರಿ ನೀರಾವರಿ ನಿಗಮ ಸಹಕರಿಸುತ್ತಿಲ್ಲ. ಚಿಕ್ಲಿಹೊಳೆ ನಾಲೆ ವ್ಯಾಪ್ತಿಯ ಅಚ್ಚುಕಟ್ಟುದಾರರಿಗೆ ಜೂನ್ ಕೊನೆಯ ವಾರದಲ್ಲಿ ಭತ್ತದ ಸಸಿಮಡಿ ತಯಾರಿಸಲು ನೀರು ಬಿಡುವುದು ವಾಡಿಕೆಯಾಗಿದ್ದು. ಆದರೆ ಈ ಬಾರಿ ಆಗಸ್ಟ್ ಮೊದಲ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ನಾಲೆಗಳಿಗೆ ನೀರು ಬಿಡಲಾಗಿದೆ. ಈ ನೀರು ಬಾಳುಗೋಡು ಮತ್ತಿತರ ಪ್ರದೇಶಗಳಿಗೆ ಬಂದು ತಲುಪುವಾಗ ಕಳೆ ತೆಗೆಯುವ ಸಮಯ ಆಗಿರುತ್ತದೆ ಎನ್ನುತ್ತಾರೆ ಸ್ಥಳೀಯ ರೈತರು.
ಮತ್ತೊಂದು ಕಡೆ ನಾಲೆಗಳಲ್ಲಿ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಕಾಲುವೆಗಳಲ್ಲಿ ಕುರುಚಲು ಕಾಡು ಬೆಳೆದು ಕೆಲವು ಭಾಗದಲ್ಲಿ ನಾಲೆಗಳು ಇರುವ ಕುರುಹು ಕೂಡ ಇಲ್ಲದಂತಾಗಿದೆ. ಇದು ಕೂಡ ಜಲಾಶಯದ ನೀರು ರೈತರ ಜಮೀನಿಗೆ ತಲುಪುವಲ್ಲಿ ವಿಫಲವಾಗಲು ಕಾರಣವಾಗಿದೆ. ಅಣೆಕಟ್ಟೆ ನಿರ್ವಹಣೆಗೆ ಅನುದಾನ ಸರಿಯಾಗಿ ಬರುತ್ತಿಲ್ಲ ಎಂದು ಇಲಾಖೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವಾರ್ಷಿಕವಾಗಿ ಸುಮಾರು 1 ಲಕ್ಷ ರೂ. ಅನುದಾನ ಬರುತ್ತಿದ್ದು ಇದರಿಂದ ನಾಲೆಗಳ ನಿರ್ವಹಣೆ ಹೇಗೆ ಸಾಧ್ಯ ? ಎನ್ನುವುದು ಅವರ ಪ್ರಶ್ನೆ.
ಚಿಕ್ಲಿಹೊಳೆ ಜಲಾಶಯದಿಂದ ರೈತರಿಗೆ ಪ್ರಯೋಜನೆ ಇಲ್ಲದಿದ್ದರೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಜಲಾಶಯ ಭರ್ತಿ ಆದಾಗ ಅರ್ಧಚಂದ್ರಾಕಾರದ ತೂಬು ಮೂಲಕ ನೀರು ಕೆಳಗೆ ಹರಿಯುವಾಗ ಉಂಟಾಗುವ ದೃಶ್ಯಾವಳಿ ಇಲ್ಲಿಯ ವಿಶೇಷ. ಸುಂದರ ಪ್ರಕೃತಿ ದೃಶ್ಯ, ಸೂರ್ಯಾಸ್ತದ ಸಮಯದ ರಮಣೀಯ ನೋಟ ಮತ್ತು ನೀರಿನ ಹರಿವು ಫೋಟೋಗ್ರಫಿ ಹಾಗೂ ರೀಲ್ಸ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆ ಆಗಿದೆ. ಜೂನ್‌ನಿಂದ ಅಕ್ಟೋಬರ್ ತನಕ ಪ್ರವಾಸಿಗರು ಇಲ್ಲಿ ಹೆಚ್ಚು ಕಂಡುಬರುತ್ತಾರೆ.
"

ನಮ್ಮ ತಂದೆಯ ತಂದೆಯ ಕಾಲದಿಂದಲೂ ನಾವು ನಮ್ಮ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದೇವೆ. ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜುಲೈ ತಿಂಗಳ ಪ್ರಾರಂಭದಲ್ಲಿ ಚಿಕ್ಲಿಹೊಳೆ ಜಲಾಶಯದಿಂದ ನಮ್ಮ ಗದ್ದೆಗಳಿಗೆ ನೀರು ಹರಿಸುವ ಕಾರ್ಯ ನಡೆಸಲಾಗುತ್ತಿತ್ತು. ಅಲ್ಲದೆ ನಾಳೆಯೊಳಗೆ ಬೆಳೆದಿರುವ ಗಿಡ ಗಂಟಿಗಳನ್ನು ಕಡೆದು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಯು ಈ ಭಾಗದ ರೈತರನ್ನು ಕಳೆಗಣಿಸುತ್ತಿದೆ. ನಾವುಗಳು ಕೆರೆ ಹಾಗೂ ಕೊಳವೆ ಬಾವಿಗಳ ನೀರನ್ನು ಬಳಸಿ ಸಸಿ ಮಾಡಿ ತಯಾರಿಸಿ ನೀರಿಗಾಗಿ ಕಾಯುತ್ತಿದ್ದೇವೆ.

— ಕೊಡೆಕಲ್ ಕುಶಾಲಪ್ಪ, ರೈತ, ದೊಡ್ಡಬೆಟ್ಟಗೇರಿ ಗ್ರಾಮ

"

ಚಿಕ್ಲಿಹೊಳೆ ಜಲಾಶಯ ಭರ್ತಿ ಆಗಿದ್ದರೂ ನಾಲೆಗಳಿಗೆ ತಡವಾಗಿ ನೀರು ಬಿಡಲಾಗಿದೆ. ಅದು ಕೂಡ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ. ತಳಭಾಗದ ರಂಗಸಮುದ್ರ ಗ್ರಾಮಕ್ಕೂ ಇದು ಸಾಕಾಗುವುದಿಲ್ಲ. ಬಾಳುಗೋಡು ಭಾಗಕ್ಕೆ ಈ ನೀರು ಬರುವಾಗ ನಮ್ಮ ಗದ್ದೆಗಳಲ್ಲಿ ಕಳೆ ಕೆಲಸ ಶುರುವಾಗಿರುತ್ತದೆ. ಅಣೆಕಟ್ಟೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ಸಕಾಲದಲ್ಲಿ ರೈತರಿಗೆ ನೀರು ಕೊಟ್ಟರೆ ಈ ವ್ಯಾಪ್ತಿಯಲ್ಲಿ ಉತ್ತಮವಾಗಿ ಭತ್ತದ ವ್ಯವಸಾಯ ಮಾಡಬಹುದಾಗಿದೆ.

— ಶಿವಕುಮಾರ್, ರೈತ, ದೊಡ್ಡಬೆಟ್ಟಗೇರಿ ಗ್ರಾಮ

"

ಚಿಕ್ಲಿಹೊಳೆ ಜಲಾಶಯದ ಬಲದಂಡೆಯ ಹೊಸ ನಾಲೆ ಕುಶಾಲನಗರದ ಸುಂದರನಗರ ಗ್ರಾಮಕ್ಕೆ ಕೊನೆಯ ಹಂತದಲ್ಲಿ ತಲುಪಲಿದೆ. ಆದರೆ ಒಟ್ಟು 15ನೇ ಕಿಲೋಮೀಟರ್ ತನಕ ಭತ್ತ ಬೆಳೆಯುವ ವ್ಯಾಪ್ತಿ ಇದ್ದು ಉಳಿದ ಭಾಗದಲ್ಲಿ ಈ ಜಲಾಶಯದ ನೀರಿನ ಅವಶ್ಯಕತೆ ಇಲ್ಲ. ಆ ಭಾಗದ ರೈತರು ತಮ್ಮ ಜಾಗವನ್ನು ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದ ನಿರ್ಮಾಣವಾದ ಈ ಜಲಾಶಯ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಾಲೆಯ ವ್ಯಾಪ್ತಿಯ ಜಾಗ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರವನ್ನು ಇದುವರೆಗೆ ಸರ್ಕಾರ ನೀಡಲಿಲ್ಲ.

— ಎಂ.ಡಿ. ಕೃಷ್ಣಪ್ಪ, ಯೋಜನೆಗಾಗಿ ಜಮೀನು ಕಳೆದುಕೊಂಡ ರೈತ

"

ರೈತರಿಗಾಗಿ ಈಗ ಕಾಲುವೆಗಳಲ್ಲಿ ನೀರು ಬಿಡಲಾಗಿದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ. ಒಮ್ಮೆಲೇ ಬಿಟ್ಟರೆ ಸೋರಿಗೆ ಆಗುವ ಸಾಧ್ಯತೆ ಇರುತ್ತದೆ. ಕ್ರಮೇಣ ನೀರಿನ ಪ್ರಮಾಣ ಹೆಚ್ಚು ಮಾಡಲಾಗುವುದು. ಅಗತ್ಯ ಇರುವ ಕಡೆಗಳಲ್ಲಿ ನಾಲೆಗಳನ್ನು ಸ್ವಚ್ಛ ಮಾಡಲಾಗಿದೆ. ಸಂಪೂರ್ಣ ದುರಸ್ತಿಗೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಆದರೆ ನಮಗೆ ಬರುತ್ತಿರುವ ಅನುದಾನ ತುಂಬಾ ಕಡಿಮೆ ಇರುವುದರಿಂದ ತುರ್ತು ಅಗತ್ಯಗಳಿಗಷ್ಟೇ ವಿನಿಯೋಗಿಸಲಾಗುತ್ತದೆ. ಸಮಸ್ಯೆಗಳನ್ನು ರೈತರು ಇಲಾಖೆ ಗಮನಕ್ಕೆ ತಂದರೆ ಆದ್ಯತೆ ಮೇಲೆ ಪರಿಹರಿಸಲಾಗುತ್ತದೆ.

— ಕಾವೇರಿ ನೀರಾವರಿ ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net