ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಪ್ರಾಚೀನ, ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧನಾ ಕೊಡವರನ್ನು ಭಾರತದ ಸಂವಿಧಾನ ಹಾಗೂ ವಿಶ್ವಸಂಸ್ಥೆಯ ಮೂಲನಿವಾಸಿ ಜನರ ಹಕ್ಕುಗಳ ಘೋಷಣೆಯಡಿಯಲ್ಲಿ ರಕ್ಷಿಸಬೇಕು. ಕೊಡವ ಸ್ಯಾಕ್ರಮೆಂಟ್ ಗನ್/ಥೋಕ್ ಅನ್ನು ಭಾರತದ ಸಂವಿಧಾನದ ೨೫, ೨೬ನೇ ವಿಧಿಗಳು ಆರ್/ಡಬ್ಲ್ಯು ೮ನೇ ಪರಿಚ್ಛೇದದಡಿಯಲ್ಲಿ ಅವಶ್ಯ ಧಾರ್ಮಿಕ ಆಚರಣೆ ಎಂದು ಗುರುತಿಸಿ ಸಂರಕ್ಷಿಸಬೇಕು. ಮೂಲನಿವಾಸಿ ಕೊಡವರ ಮಾತೃಭಾಷೆಯಾದ ಶಾಸ್ತ್ರೀಯ ಕೊಡವ ಭಾಷೆಯನ್ನು ಭಾರತದ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕು. ಪವಿತ್ರ ನೆಲಗಳು, ದೇವರ ಕಾಡುಗಳು, ಮಂದ್‌ಗಳು, ಪವಿತ್ರ ಸ್ಥಳಗಳು, ಜಾನಪದ ಕಲೆಗಳು, ಹಾಡು, ಪರೆಯಕಾಳಿ, ಉಮ್ಮತ್ತಾಟ್, ಕೋಲಾಟ್, ಬೋಳ್ಕಾಟ್ ಸೇರಿದಂತೆ ಕೊಡವರ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.