ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾವೇರಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು. ಕಾವೇರಿಯಪ್ಪ, ಮಾದಯ್ಯ, ಸಂತೋಷ್ ಚೌಹಾಣ್ ಇತರರಿದ್ದರು.
ಕಾವೇರಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು. ಕಾವೇರಿಯಪ್ಪ, ಮಾದಯ್ಯ, ಸಂತೋಷ್ ಚೌಹಾಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ಗೋಣಿಕೊಪ್ಪ: ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾವೇರಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಇಂದು ದೇಶದ ಸ್ವಾಭಿಮಾನದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡಿಪಿಟ್ಟ ಭಾರತಾಂಬೆಯ ಧೈರ್ಯಶಾಲಿ ಪುತ್ರರ ಅಪ್ರತಿಮ ಶೌರ್ಯವನ್ನು ನೆನೆಯುವ ದಿನವಾಗಿದೆ. ಜನ್ಮಭೂಮಿಗಾಗಿ ಜೀವ ತ್ಯಾಗ ಮಾಡಿದ ನಮ್ಮ ಹೆಮ್ಮೆಯ ಯೋಧರ ಸಾಹಸ ಮತ್ತು ದೇಶಪ್ರೇಮ ಇಂದಿನ ಯುವ ಜನತೆಗೆ ಸ್ಫೂರ್ತಿ ನೀಡುತ್ತದೆ. ಇತ್ತೀಚೆಗೆ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಶಕ್ತಿಗಳು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು.
ಯಾವ ರೀತಿಯಲ್ಲಿ ದೇಶದ ಹೊರಗಿನ ಶತ್ರುಗಳನ್ನು ನಮ್ಮ ಸೈನಿಕರು ಮಟ್ಟ ಹಾಕುತಿದ್ದಾರೋ ಅದೇ ರೀತಿ, ಇಂದಿನ ಯುವಕರ ಬದುಕನ್ನು ಹಾಳು ಮಾಡುತ್ತಿರುವ ಮಾದಕವಸ್ತು ಎಂಬ ಶತ್ರುವನ್ನು ಬಡಿದೋಡಿಸಿ, ಅರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಗೋಣಿಕೊಪ್ಪದ ಹಿರಿಯ ವೈದ್ಯರಾದ ಡಾ.ಕಾಳಿಮಾಡ ಶಿವಪ್ಪ ದೇಶಭಕ್ತಿ ಗೀತೆಯ ಮೂಲಕ ಕಾರ್ಗಿಲ್ ಕದನ ಕಲಿಗಳಿಗೆ ಗೌರವ ಸಮರ್ಪಿಸಿದರು.
ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಅವರು ಮಾತನಾಡಿ, ಕಾರ್ಗಿಲ್ ಕದನದ ಗೆಲುವು ವಿಶ್ವಕ್ಕೆ ಭಾರತದ ತಾಕತ್ತನ್ನು ಪರಿಚಯಿಸುವುದರ ಜೊತೆಗೆ, ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತು. ಇಂತಹ ವೀರ ಯೋಧರನ್ನು ಸ್ಫೂರ್ತಿಯಾಗಿಸಿಕೊಂಡು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಗ್ರಂಥಪಾಲಕ ಡಾ.ಸಂತೋಷ್ ಚೌಹಾಣ್, ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಆಕ್ರಂ, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net