ವಿರಾಜಪೇಟೆ ಐತಿಹಾಸಿಕ ಗೌರಿ-ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಪೊಲೀಸ್ ಉಪ ಅಧೀಕ್ಷಕ ಮಹೇಶ್ ಕುಮಾರ್ ಮಾತನಾಡಿದರು. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್, ಅಪರಾಧ ವಿಭಾಗದ ಪಿಎಸ್‌ಐ ಕಾವೇರಪ್ಪ ಇದ್ದರು.
ವಿರಾಜಪೇಟೆ:ಐತಿಹಾಸಿಕ ಗೌರಿ-ಗಣೇಶೋತ್ಸವವನ್ನು ಶಾಂತಿಯುತ, ಸಾಂಪ್ರದಾಯಿಕ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಸಭೆ ನಡೆಯಿತು.
ವಿರಾಜಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕರಾದ ಮಹೇಶ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉತ್ಸವದ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಡಿಜೆ ಬಳಕೆ ನಿಯಂತ್ರಿಸುವುದು ಹಾಗೂ ಸಾಂಪ್ರದಾಯಿಕ ಆಚರಣೆಗೆ ಆದ್ಯತೆ ನೀಡುವ ಕುರಿತು ವಿವಿಧ ಉತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಸದೇ ಉತ್ಸವವನ್ನು ಆಚರಿಸುವಂತೆ ಪೊಲೀಸ್ ಉಪ ಅಧೀಕ್ಷಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಡಳಿಯವರು, ಪೊಲೀಸ್ ಇಲಾಖೆ ವಿಧಿಸುವ ಎಲ್ಲ ನಿಯಮಗಳು ಹಾಗೂ ಮಾನದಂಡಗಳನ್ನು ಪಾಲಿಸುವ ಷರತ್ತಿನಡಿ ಡಿಜೆ ಬಳಸಲು ಅವಕಾಶ ನೀಡಬೇಕು. ಕಳೆದ ವರ್ಷವೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ಸವವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಬಾರಿಯೂ ಅದೇ ರೀತಿಯಲ್ಲಿ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಡಿಜೆ ಬಳಕೆ ಸಂಬಂಧ ಎಲ್ಲ ಸಮಿತಿಗಳ ಅಭಿಪ್ರಾಯಗಳನ್ನು ಮತ್ತೊಮ್ಮೆ ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಆ.3ರಂದು ಸಂಜೆ 4 ಗಂಟೆಗೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್, ಅಪರಾಧ ವಿಭಾಗದ ಪಿಎಸ್‌ಐ ಕಾವೇರಪ್ಪ ಹಾಗೂ ಪೊಲೀಸ್ ಸಿಬ್ಬಂದಿ, ವಿವಿಧ ಗೌರಿ-ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.