ಸೋಮವಾರಪೇಟೆ: ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುವುದರಿಂದ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ ಗೆಲುವಿಗೆ ಶ್ರಮಿಸಬೇಲು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಮಹಿಳಾ ಸಮಾಜದಲ್ಲಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಕಾರ್ಯಕರ್ತರ ಬೇಡಿಕೆ ಹಾಗೂ ಸಮಸ್ಯೆ ಆಲಿಸಿ ಮಾತನಾಡಿದರು. ಎಸ್‌ಐಆರ್ ಕುರಿತು ಹೆಚ್ಚು ಗಮನ ಹರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಆಯಾ ಪ್ರದೇಶಗಳಲ್ಲಿ ಸಮಸ್ಯೆಗೀಡಾದವರು ಹಾಗೂ ಅನಾರೋಗ್ಯಕ್ಕೆ ತುತ್ತಾದವರ ಬಗ್ಗೆ ಕಾಳಜಿ ವಹಿಸಿ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಅಂತಹ ವಿಷಯಗಳನ್ನು ನನ್ನ ಗಮನಕ್ಕೂ ತರಬೇಕೆಂದು ತಿಳಿಸಿದರು.
ಸ್ಥಳೀಯ ಬೂತ್‌ಮಟ್ಟದಿಂದ ತಾಲೂಕುಮಟ್ಟದವರೆಗೆ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕಾಗಿದೆ. ನಗರದ ಸ್ವಚ್ಛತೆ ವಿಚಾರದಲ್ಲಿಯೂ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಿ ಶಾಸಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಯೋಜನಾ ಪ್ರಾಧಿಕಾರ ತಾಲೂಕು ಅಧ್ಯಕ್ಷ ಕೆ.ಎ.ಆದಮ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಸಿ.ನಾಗೇಶ್, ನಗರ ಕಾರ್ಯದರ್ಶಿ ಭುವನೇಶ್, ಮಹಿಳಾ ಘಟಕ ಅಧ್ಯಕ್ಷೆ ಶುಭಾ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಿ.ಸಿ. ವೆಂಕಟೇಶ್ ಮತ್ತಿತರರು ಇದ್ದರು.