ವಿದ್ಯಾರ್ಥಿ ಹಂತದಲ್ಲೇ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ

ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಂ ಟಿಟೊ ಅವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಸ್ತಾಂತರಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಮಹಂತ ಶಿವಲಿಂಗ, ಬಸವಲಿಂಗ ಶಿವಯೋಗಿ ಸ್ವಾಮಿಜಿ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಇದ್ದರು.
ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಂ ಟಿಟೊ ಅವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಸ್ತಾಂತರಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಮಹಂತ ಶಿವಲಿಂಗ, ಬಸವಲಿಂಗ ಶಿವಯೋಗಿ ಸ್ವಾಮಿಜಿ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸಲಹೆ

ವಿರಾಜಪೇಟೆ:

ಕೊಡಗಿನ ನೆಲದಲ್ಲಿ ಶಿಕ್ಷಣ ಸಂಸ್ಥೆಗಳು ಹಾಲೇರಿ ಅರಸರಾದಿಯಾಗಿ ಬ್ರಿಟೀಷರ ಕಾಲದಲ್ಲಿ ಸ್ಥಾಪನೆಗೊಂಡರೂ, ಅನಾದಿ ಕಾಲದಿಂದ ವಿಭಿನ್ನ ಸಂಸ್ಕೃತಿಯೊಂದಿಗೆ ಸಂಸ್ಕಾರಯುತವಾದ ಸಾಮಾಜಿಕ ಬದುಕು ಹುಟ್ಟಿಕೊಂಡು ಬಂದಿರುವುದು ಈ ನೆಲದ ಪಾವಿತ್ರ್ಯತೆಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.

ಅರಮೇರಿ ಕಳಂಚೇರಿಯಲ್ಲಿನ ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯಲ್ಲಿ ಅಕಾಡೆಮಿಯ 17ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕ ಶಾಂತಮಲ್ಲ ಸ್ವಾಮೀಜಿ ಅವರ 29ನೇ ಗುರುಸ್ಮರಣೆಯ ದಿನವಾದ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ಸರ್ವರೂ ಸಹೋದರತೆ, ಸೌಹಾರ್ದತೆ ಹಾಗೂ ಸಮಾನತೆಯಿಂದ ಬದುಕು ರೂಪಿಸಿಕೊಂಡಿರುವುದು ದೇಶಕ್ಕೆ ಮಾದರಿ. ಶಾಲಾ ಜೀವನದಲ್ಲೇ ಮಕ್ಕಳು ಇವನ್ನೆಲ್ಲ ಅರಿತುಕೊಂಡು ಭವಿಷ್ಯನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನೂತನ ಯೋಜನೆಯಾಗಿ ಕೊಡವ ಪುಸ್ತಕ ಪತ್ತಾಯವನ್ನು ವಿದ್ಯಾಸಂಸ್ಥೆಗಳಲ್ಲಿ, ಐನ್‌ಮನೆಗಳಲ್ಲಿ, ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಜನಪದೀಯವಾದ ಕೊಡವ ಸಾಹಿತ್ಯ ಜಿವಂತವಾಗಿರಲು ಸಾಧ್ಯವಿದೆ.
ಶಾಲೆಯಲ್ಲಿ ಪಠ್ಯದ ಜತೆಗೆ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳುವ ಸಲುವಾಗಿ ದಿನಕ್ಕೆ ಅರ್ಧ ಗಂಟೆಯಾದರೂ ಮಕ್ಕಳನ್ನು ಗ್ರಂಥಾಲಯಗಳಲ್ಲಿ ಕತೆ, ಕಾದಂಬರಿಯಂತಹ ಸಾಹಿತ್ಯವನ್ನು ಓದಲು ಬಿಡುವು ಮಾಡಿಕೊಡಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ. ಬದುಕಿನ ಹಲವು ಮಗ್ಗುಲಗಳನ್ನು ತಿಳಿದುಕೊಳ್ಳಲು ಕತೆ, ಕಾದಂಬರಿ, ವೈಚಾರಿಕ ಲೇಖನಗಳ ಸಾಹಿತ್ಯವು ಅನುಕೂಲವಾಗಿದ್ದು, ಶಿಕ್ಷಣವೆಂಬುದು ಕೇವಲ ಪಠ್ಯದೊಂದಿಗಿನ ಸಮ್ಮಿಲನವಾಗಿರಬಾರದು ಎಂದು ಹೇಳಿದರು.
ವಿದ್ಯಾಸಂಸ್ಥೆಯ ಮುಖ್ಯಸ್ಥ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೊಡವ ಭಾಷೆ ಸಾಮಾಜಿಕ ಸಂವಹನವಾಗಿದ್ದು ಇದರ ಮೂಲಕ ಸಮಾಜದೊಂದಿಗೆ ಬೆರೆತುಕೊಳ್ಳಲು ಅನುಕೂಲವಾಗುತ್ತದೆ. ಕೇವಲ ಕನ್ನಡವೊಂದೇ ತಿಳಿದಿದ್ದ ನನಗೆ ಕ್ರಮೇಣ ಕೊಡವ, ಮಲಯಾಳಂ, ತುಳುವಿನಂತಹ ಭಾಷೆಯನ್ನು ಕಲಿತುಕೊಳ್ಳಲು ಸಾಧ್ಯವಾದ ಮೇರೆಗೆ ಆ ಎಲ್ಲ್ಲ ವರ್ಗದವರೊಂದಿಗೆ ಬೆರೆತುಕೊಳ್ಳಲು, ಸರ್ವರ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಾಯಿತು. ಕೊಡವ ಬಾಷೆಯು ಪ್ರಾಚೀನವಾಗಿದ್ದು, ಕೃಷಿ ಆಧಾರಿತ ಸಂಸ್ಕೃತಿಯೊಂದಿಗೆ ಈ ನಾಡು ಕೊಡಗಿನಲ್ಲಿ ಪ್ರಮುಖವಾದ ಹಬ್ಬಗಳು ಇಲ್ಲಿನ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ ಎಂದರು.
ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿದರು.
ಮಹಾಂತ ಶಿವಲಿಂಗ, ಬಸವಲಿಂಗ ಶಿವಯೋಗಿ ಸ್ವಾಮಿಜಿ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮುತ್ತಿನಕಂತೆ ಸ್ವಾಮೀಜಿ, ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net