

ಕೊಡಗಿಗೆ ಬರುವ ಅತಿಥಿಗಳಿಗೆ ಈ ರೀತಿ ತೊಂದರೆ ಆಗುತ್ತಿರುವುದು ದುರಂತ. ಎಲ್ಲೋ ಕೆಲವು ಭಾಗದಲ್ಲಿ ಆಗುವ ಇಂಥ ಘಟನೆಗಳಿಂದ ಕೊಡಗಿನ ಹೆಸರು ಹಾಳು ಮಾಡಿದಂತಾಗುತ್ತಿದೆ. ಈ ರೀತಿ ಆಗಬಾರದು. ಪ್ರವಾಸಿಗರು ಬರಲು ಅತ್ಯುತ್ತಮ ಸ್ಥಳ ಕೊಡಗು. ಈ ರೀತಿಯ ಘಟನೆ ಆದ ತಕ್ಷಣ ಹೋಂ ಸ್ಟೇ ಮಾಲೀಕರು ಪೊಲೀಸ್ ದೂರ ನೀಡಬೇಕು. ಮುಂದೆ ಎಂದೂ ಇಂಥ ಘಟನೆಗಳು ನಡೆಯದಿರಲಿ. ಕೊಡಗಿನ ಹೆಸರಿಗೆ ಕಪ್ಪು ಚುಕ್ಕೆ ಬೀಳದಿರಲಿ.
ಹೋಂಸ್ಟೇ ಸಿಬ್ಬಂದಿಗೆ ನಡವಳಿಕೆ ಮತ್ತು ಅತಿಥಿ ಗೌರವದ ಬಗ್ಗೆ ತರಬೇತಿ ನೀಡುವುದು ಅತ್ಯಗತ್ಯ. ಸಿಸಿಟಿವಿ ಕ್ಯಾಮೆರಾ, ಸುರಕ್ಷತಾ ಸಿಬ್ಬಂದಿ, ಮಹಿಳಾ ಪ್ರವಾಸಿಗರಿಗಾಗಿ ಪ್ರತ್ಯೇಕ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಪ್ರವಾಸಿಗರಿಗಾಗಿ ಹೆಲ್ಪ್ಲೈನ್ ಸಂಖ್ಯೆಗಳು, ತುರ್ತು ಸೇವೆಗಳ ಮಾಹಿತಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಯಾವುದೇ ಅನುಮಾನಾಸ್ಪದ ಘಟನೆ ಕಂಡುಬAದರೆ ತಕ್ಷಣ ಮಾಹಿತಿ ನೀಡಲು ಪ್ರೋತ್ಸಾಹಿಸಬೇಕು. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು.
ಹೋಂಸ್ಟೇಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿ, ಮಾಲೀಕರ ಹಿನ್ನೆಲೆ ಪರಿಶೀಲನೆ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಕೆ, ಅತಿಥಿಗಳ ಸರಿಯಾದ ದಾಖಲಾತಿ ನಿರ್ವಹಣೆ ಇರಬೇಕು. ಪ್ರವಾಸಿಗರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಬೇಕು. ಸ್ಥಳೀಯ ಪೊಲೀಸ್‌ರಿಂದ ನಿಯಮಿತ ತಪಾಸಣೆ ನಡೆಯಬೇಕು. ಸರ್ಕಾರ, ಹೋಂಸ್ಟೇ ಮಾಲೀಕರು ಮತ್ತು ಸಾರ್ವಜನಿಕರು ಒಟ್ಟಾಗಿ ಜವಾಬ್ದಾರಿಯಿಂದ ನಡೆದುಕೊಂಡರೆ ಮಾತ್ರ ಪ್ರವಾಸೋದ್ಯಮದ ಮೇಲಿನ ವಿಶ್ವಾಸ ಉಳಿಯುತ್ತದೆ.
ಜಿಲ್ಲೆಯ ಎಲ್ಲಾ ಹೋಂಸ್ಟೇಗಳ ಕುರಿತು ಪರಿಶೀಲನಾ ಕಾರ್ಯ ನಡೆಸಲಾಗುವುದು. ಒಂದು ವೇಳೆ ಅಕ್ರಮ, ಅನಧಿಕೃತ, ನಿಯಮ ಉಲ್ಲಂಘನೆಗಳು ಕಂಡು ಬಂದರೆ ಕ್ರಮ ನಿಶ್ಚಿತ. ಎಲ್ಲಾ ಹೋಂಸ್ಟೇ ಮಾಲೀಕರು ಎಲ್ಲ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಬೇಕು. ವಿದೇಶಿಯರು ಬಂದು ಉಳಿದುಕೊಂಡಾಗ ಸಮೀಪದ ಪೊಲೀಸ್ ಠಾಣೆಯಲ್ಲಿ 'ಸಿ' ಫಾರಂ ನೀಡುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಕ್ರಮ ಖಚಿತ. ಪ್ರತಿ ಹೋಂಸ್ಟೇಗಳ ಮುಂದೆ ತಮ್ಮ ನೋಂದಣಿ ಸಂಖ್ಯೆ, ಅದರ ಅವಧಿ ಸೇರಿದಂತೆ ಮತ್ತಿತರ ವಿವರಗಳನ್ನು ಹಾಕುವುದು ಕಡ್ಡಾಯ. ಪರವಾನಗಿ ಪಡೆಯದೇ ಇದ್ದರೆ ಅಂತಹವರು ಹೋಂಸ್ಟೇ ನಡೆಸಬಾರದು.