ಪೊನ್ನ0ಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ನಡೆದ ಬೊಟ್ಟಿಯತ್‌ನಾಡ್ ಕಪ್ ಹಾಕಿ ಫೈನಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ಬೊಟ್ಟಿಯತ್ ನಾಡ್ ತಂಡ ಮತ್ತು ಕೋಣನಕಟ್ಟೆ ತಂಡ.
ಬೊಟ್ಟಿಯತ್‌ನಾಡ್ ಕಪ್ ಹಾಕಿ ಫೈನಲ್ ಪಂದ್ಯ ಭಾನುವಾರ (ನ.23) ಸಂಜೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ನಡೆಯಿತು. ಬೊಟ್ಟಿಯತ್ ನಾಡ್ ಮತ್ತು ಕೋಣನಕಟ್ಟೆ ತಂಡಗಳ ನಡುವೆ ನಡೆದ ಫೈನಲ್ ಪಂದ್ಯವನ್ನು ಭಾರತದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಐಸಿಸಿ ಹಾಲಿ ರೆಫ್ರಿ ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಚಂಡನ್ನು ಹಾಕಿ ಸ್ಟಿಕ್‌ನಿಂದ ತಳ್ಳುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗು ಹಾಕಿಗೆ ಹೆಸರುವಾಸಿಯಾಗಿದ್ದು ಅತೀ ಹೆಚ್ಚು ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಚಾರ. ಕೊಡಗಿನ ಸಂಸ್ಕೃತಿ ಇಡೀ ದೇಶದಲ್ಲೇ ವಿಭಿನ್ನವಾಗಿದ್ದು ಇಂದಿನ ಫೈನಲ್ ಪಂದ್ಯದ ಸಮಾರೋಪ ಸಮಾರಂಭದ ಅತಿಥಿಯಾಗಿ ಬಂದಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಬೊಟ್ಟಿಯತ್ ನಾಡ್ ಹಾಕಿ ಕ್ಲಬ್ಬಿನ ಅಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ಮೇಕೇರಿರ ನಿತಿನ್, ಮಾದಂಡ ತಿಮ್ಮಯ್ಯ, ಕೂರ್ಗ್ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಪಳಂಗAಡ ಲವಕುಮಾರ್ ಇದ್ದರು.
ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಬೊಟ್ಟಿಯತ್ ನಾಡ್ ತಂಡ 2-0 ಮುನ್ನಡೆ ಕಾಯ್ದುಕೊಂಡು ಪಂದ್ಯದಲ್ಲಿ ಹಿಡಿತ ಸಾಧಿಸಿತು. ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ ನಡೆಸಿ ಕೋಣನಕಟ್ಟೆ ತಂಡ 2 ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿತು. ನಂತರ ನಡೆದ ಶೂಟೌಟ್‌ನಲ್ಲಿ 3-3ಗೋಲುಗಳಿಂದ ಸಮಬಲ ಸಾಧಿಸಿದ ನಂತರ ಸಡನ್ ಡೆತ್‌ನಲ್ಲಿ 1-0 ಗೋಲುಗಳಿಂದ ಬೊಟ್ಟಿಯತ್ ನಾಡ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತ ತಂಡ 55,555 ರೂ ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ರನ್ನರ್ ಅಪ್ ತಂಡ 44,444 ರೂ. ನಗದು ಮತ್ತು ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡಿತು.