ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ ಪತ್ರ ಬಂದಿದೆ. ಶುಕ್ರವಾರ ರಾತ್ರಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು ಶನಿವಾರ ಮಧ್ಯಾಹ್ನ ಸ್ಫೋಟಿಸುವ ಎಚ್ಚರಿಕೆ ನೀಡಲಾಗಿತ್ತು. ಇದರ ಜತೆಯಲ್ಲಿ ಪಕ್ಕದಲ್ಲೇ ಇರುವ ಕೇಂದ್ರೀಯ ವಿದ್ಯಾಲಯದಲ್ಲೂ ಬಾಂಬ್ ಇಟ್ಟಿರುವುದಾಗಿ ಇದೇ ಪತ್ರದಲ್ಲಿ ಹೇಳಲಾಗಿತ್ತು. ಬೆಳಗ್ಗೆ ಇಮೇಲ್ ಗಮನಿಸಿದ ನ್ಯಾಯಾಲಯದ ಸಿಬ್ಬಂದಿ ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಎರಡೂ ಕಡೆಯಲ್ಲೂ ಒಳಗಡೆಗೆ ಪ್ರವೇಶ ನಿರ್ಬಂಧಿಸಲಾಯಿತು. ತಕ್ಷಣ ಸ್ಥಳಕ್ಕೆ ಬಂದ ನಕ್ಷಲ್ ನಿಗ್ರಹ ದಳ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ನ್ಯಾಯಾಲಯ ಮತ್ತು ಕೇಂದ್ರೀಯ ವಿದ್ಯಾಲಯದಲ್ಲಿ ಶೋಧ ನಡೆಸಿದ ನಂತರ ಇದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಸಾಬೀತಾಯಿತು. ಮಂಗಳವಾರ (ಜೂ.23) ಕೂಡ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ ಮೇಲ್ ಬಂದಿತ್ತು. ಪದೇ ಪದೇ ಈ ಕೃತ್ಯ ನಡೆಸಿ ಆತಂಕಕ್ಕೆ ಕಾರಣವಾಗುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿದ್ದಾರೆ.