

ನಾಪೋಕ್ಲು: ರಕ್ತದಾನವು ಕೇವಲ ದಾನವಲ್ಲ, ಅದು ಮತ್ತೊಂದು ಜೀವಕ್ಕೆ ನೀಡುವ ಬದುಕಿನ ಉಡುಗೊರೆ ಎಂದು ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ. ಕರುಂಬಯ್ಯ ಹೇಳಿದರು.
ಹೊಸತೋಟ ಗ್ರಾಮದಲ್ಲಿ ಪ್ರಸನ್ನ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನದ ಮಹತ್ವ ಅನನ್ಯವಾಗಿದೆ ಎಂದ ಅವರು, ರಕ್ತದ ಉಪಯೋಗಗಳು ಹಾಗೂ ತುರ್ತು ಸಂದರ್ಭದಲ್ಲಿ ಅದರ ಅಗತ್ಯತೆ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಉದ್ಯಮಿ ಎಡಿಕೇರಿ ಪ್ರಸನ್ನ ಅವರು ಸ್ವತಃ ರಕ್ತದಾನ ಮಾಡಿ ಮಾತನಾಡಿ, ಯುವಜನರು ರಕ್ತದಾನ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದರು. ಶಿಬಿರದ ಸಂಘಟಕರಾದ ಹೊಸತೋಟದ ರಾಜೇಶ್ ಹಾಗೂ ಹರೀಶ್ ಅವರನ್ನು ಗೌರವಿಸಲಾಯಿತು. ಮಡಿಕೇರಿ ವೈದ್ಯಕೀಯ ಕಾಲೇಜಿನ ವೈದ್ಯರು, ರಕ್ತನಿಧಿ ವಿಭಾಗದ ಸಿಬ್ಬಂದಿ ಹಾಜರಿದ್ದರು.