ರಕ್ತ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಅತ್ಯಮೂಲ್ಯ ವಸ್ತು

 ಪೊನ್ನಂಪೇಟೆಯ ನ್ಯಾಯಾಲಯದ ಆವರಣದಲ್ಲಿ ಏರ್ಪಡಸಿದ್ದ ರಕ್ತದಾನ ಶಿಬಿರವನ್ನು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಉದ್ಘಾಟಿಸಿದರು.  ಮಂಜುನಾಥ್, ಶ್ರೀನಾಥ್ ಮತ್ತಿತರರು ಇದ್ದರು.
ಪೊನ್ನಂಪೇಟೆಯ ನ್ಯಾಯಾಲಯದ ಆವರಣದಲ್ಲಿ ಏರ್ಪಡಸಿದ್ದ ರಕ್ತದಾನ ಶಿಬಿರವನ್ನು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಉದ್ಘಾಟಿಸಿದರು. ಮಂಜುನಾಥ್, ಶ್ರೀನಾಥ್ ಮತ್ತಿತರರು ಇದ್ದರು.
Published on
ಪೊನ್ನಂಪೇಟೆ:
ರಕ್ತವು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಅತ್ಯಮೂಲ್ಯ ವಸ್ತುವಾಗಿದ್ದು, ಅಪಘಾತ ಹಾಗೂ ಶಸ್ತ್ರಚಿಕಿತ್ಸೆಯಂತಹ ತುರ್ತು ಸಂದರ್ಭಗಳಲ್ಲಿ ಇದರ ಅಗತ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯವಂತ ವಕೀಲರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಲು ಸಹಕರಿಸಬೇಕು ಎಂದು ವಿರಾಜಪೇಟೆ ಹಿರಿಯ ಶ್ರೇಣಿ ನ್ಯಾಯಾಧೀಶ ಮಂಜುನಾಥ್ ಹೇಳಿದರು. ಪೊನ್ನಂಪೇಟೆಯ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಪೊನ್ನಂಪೇಟೆ ವಕೀಲರ ಸಂಘ, ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಕೊಡಗು ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಮಾಜಿಕ ಕಳಕಳಿಯಿಂದ ವಕೀಲರ ಸಂಘ ಹಮ್ಮಿಕೊಂಡಿರುವ ಈ ಮಾನವೀಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶ ಶ್ರೀನಾಥ್, ರಕ್ತದಾನ ಮಾಡುವ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಶಿಬಿರದಲ್ಲಿ ಕೇವಲ ೩೫೦ ಮಿ.ಲೀ. ರಕ್ತವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಇದರಿಂದ ದೇಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಏಕೈಕ ರಕ್ತನಿಧಿ ಕೇಂದ್ರ ಮಡಿಕೇರಿಯಲ್ಲಿದ್ದು, ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿರಂತರವಾಗಿ ರಕ್ತ ಪೂರೈಸುವ ಹೊಣೆಗಾರಿಕೆ ಇದೆ. ತಿಂಗಳಿಗೆ ಕನಿಷ್ಠ ೧೦ ಶಿಬಿರಗಳನ್ನು ನಡೆಸಿದರೂ ಬೇಡಿಕೆಗೆ ತಕ್ಕಂತೆ ರಕ್ತ ಸಂಗ್ರಹಿಸುವುದು ಸವಾಲಾಗಿದೆ. ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ರೋಗಿಗಳು ಮೈಸೂರು ಅಥವಾ ಮಂಗಳೂರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರಲ್ಲದೆ ಒಮ್ಮೆ ಸ್ವೀಕರಿಸಿದ ರಕ್ತವನ್ನು ವಿವಿಧ ಘಟಕಗಳಾಗಿ ವಿಂಗಡಿಸಿ ಹಲವು ರೋಗಿಗಳ ಜೀವ ಉಳಿಸಲು ಬಳಸಲಾಗುತ್ತದೆ. ಅಲ್ಲದೆ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ ಎಂದರು.
ಈ ಶಿಬಿರದಲ್ಲಿ ವಕೀಲರು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು ೨೬ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net