ಬೃಹತ್ ಬೆಂಗಳೂರು ಚಲೋ ಭಿತ್ತಿಪತ್ರ ಬಿಡುಗಡೆ

ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯ ಭಿತ್ತಿಪತ್ರವನ್ನು ಮಡಿಕೇರಿ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಗಾಯತ್ರಿ ನರಸಿಂಹ, ಪಿ. ಭೋಜ, ಹೆಚ್.ಹೆಚ್. ಗೌರಮ್ಮ, ಪಿ.ಜಿ. ಗಣೇಶ, ಪಿ.ಪಿ. ನಿತಿನ್, ಪಿ.ಕೆ. ಕಾವೇರಿ ಇದ್ದರು.
ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯ ಭಿತ್ತಿಪತ್ರವನ್ನು ಮಡಿಕೇರಿ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಗಾಯತ್ರಿ ನರಸಿಂಹ, ಪಿ. ಭೋಜ, ಹೆಚ್.ಹೆಚ್. ಗೌರಮ್ಮ, ಪಿ.ಜಿ. ಗಣೇಶ, ಪಿ.ಪಿ. ನಿತಿನ್, ಪಿ.ಕೆ. ಕಾವೇರಿ ಇದ್ದರು.
Published on
ಮಡಿಕೇರಿ:
ಮಾ. 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲೆಯ ಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಬೆಂಗಳೂರು ಚಲೋ ಪ್ರತಿಭಟನೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಶೇ.24.1ರಷ್ಟು ಅನುದಾನ ಮೀಸಲಿರಿಸಬೇಕು, ಹಣ ದುರ್ಬಳಕೆ ತಡೆಯಲು ಕಾಯ್ದೆಯ ಸೆಕ್ಷನ್ 7 (ಸಿ) ರದ್ದುಪಡಿಸಬೇಕು, ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ 25 ಸಾವಿರ ಕೋಟಿ ರೂ. ಹಣ ವಾಪಸ್ ಮಾಡಬೇಕು, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾ. 11ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಆವೈಜ್ಞಾನಿಕವಾಗಿದ್ದು ಪ್ರಸ್ತುತ ಭೂಮಿಯ ದರ ಹೆಚ್ಚಿಸಿ ಆದೇಶ ಹೊರಡಿಸಬೇಕು. ಖಾಲಿ ನಿವೇಶನ(ಖಾಲಿ ಜಾಗ) ಹೊಂದಿರುವ ವಸತಿ ಸೌಲಭ್ಯ ವಂಚಿತರಿಗೆ ವಸತಿ ಮಂಜೂರು ಮಾಡಬೇಕು ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳ ದರ ಏರಿಕೆಯ ಪರಿಣಾಮ ವಸತಿ ನಿರ್ಮಾಣ ವೆಚ್ಚ ಕನಿಷ್ಠ 5 ಲಕ್ಷ ರೂ. ವರೆಗೆ ಹೆಚ್ಚಿಸಬೇಕು. ಸ್ವಂತ ನಿವೇಶನ ಹೊಂದಿರದ ವಸತಿ ರಹಿತರಿಗಾಗಿ ಸರ್ಕಾರಿ ಭೂಮಿ ಗುರುತಿಸಬೇಕು. ಸರ್ಕಾರಿ ಭೂಮಿ ಲಭ್ಯವಿರದಿದ್ದರೆ ಖಾಸಗಿ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಿ ನಿವೇಶನ ಹಂಚಿಕೆ ಮಾಡಬೇಕು. ಇದೂ ಸಾಧ್ಯವಾಗದಿದ್ದಲ್ಲಿ ನಿವೇಶನ ಖರೀದಿಸಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರ್ಥಿಕ ನೆರವು ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ- 2020 ತಕ್ಷಣವೇ ರದ್ದುಪಡಿಸಬೇಕು ಹಾಗೂ ಭಾರತದಿಂದ ವಿದೇಶಗಳಿಗೆ ಮಾಡುತ್ತಿರುವ ದನದ ಮಾಂಸ ರಫ್ತು ನಿಲ್ಲಿಸಬೇಕು ಸೇರಿದಂತೆ ಇನ್ನಿತರ 16 ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಪಿ. ಭೋಜ, ಮಡಿಕೇರಿ ತಾಲೂಕು ಮಹಿಳಾ ಸಂಚಾಲಕಿ ಹೆಚ್.ಹೆಚ್. ಗೌರಮ್ಮ, ಪೊನ್ನಂಪೇಟೆ ತಾಲೂಕು ಸಂಚಾಲಕ ಪಿ.ಜಿ. ಗಣೇಶ, ಸದಸ್ಯರಾದ ಪಿ.ಪಿ. ನಿತಿನ್, ಪಿ.ಕೆ. ಕಾವೇರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net