ಭಾಗಮಂಡಲ, ತಲಕಾವೇರಿ ಶ್ರೀಮಂತ ದೇಗುಲಗಳು

ಕಾವೇರಿ ನದಿ ಉಗಮ ಸ್ಥಾನ ಶ್ರೀ ತಲಕಾವೇರಿ
ಕಾವೇರಿ ನದಿ ಉಗಮ ಸ್ಥಾನ ಶ್ರೀ ತಲಕಾವೇರಿ
Published on
ಮಡಿಕೇರಿ:
ಕೊಡಗಿನ ಮಟ್ಟಿಗೆ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನ ಜಿಲ್ಲೆಯ ಶ್ರೀಮಂತ ದೇವಾಲಯಗಳಾಗಿ ಹೊರಹೊಮ್ಮಿವೆ. 6 ವರ್ಷಗಳಿಂದ ಈಚೆಗೆ ಈ ದೇವಾಲಯಗಳ ವಾರ್ಷಿಕ ಆದಾಯ ಕೋಟಿ ರೂ. ದಾಟಿದ್ದು, ಕಳೆದ ಮೂರು ವರ್ಷಗಳಿಂದ 2 ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಹರಿದುಬಂದಿದೆ. ಈ ದೇವಾಲಯಗಳೂ ಸೇರಿದಂತೆ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಮೂರು ಪ್ರಮುಖ ದೇವಾಲಯಗಳು ಕಳೆದ 6 ವರ್ಷಗಳಲ್ಲಿ ಸುಮಾರು 16.77 ಕೋಟಿ ರೂ. ಆದಾಯ ಗಳಿಸಿವೆ.
ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಮಡಿಕೇರಿ ತಾಲೂಕಿನ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನ, ಮಡಿಕೇರಿ ನಗರದಲ್ಲಿ ಇರುವ ಶ್ರೀ ಓಂಕಾರೇಶ್ವರ ದೇವಸ್ಥಾನ ಹಾಗೂ ಮಡಿಕೇರಿ ತಾಲೂಕು ಪಾಡಿಯಲ್ಲಿ ಇರುವ ಶ್ರೀ ಇಗ್ಗುತ್ತಪ್ಪ ದೇವಾಲಯಗಳು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಎ ಪ್ರವರ್ಗದ ದೇವಸ್ಥಾನಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿರುವುದರಿಂದ ಈ ದೇವಾಲಯಗಳ ಆದಾಯದಲ್ಲೂ ಹೆಚ್ಚಳ ಕಂಡು ಬರುತ್ತಿದೆ.
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ಥಾನ ಪಡೆದು ಕೊಂಡಿರುವ ಈ ಮೂರು ದೇವಾಲಯಗಳ ನಾಲ್ಕು ತಾಣಗಳು ಜಿಲ್ಲೆಯ ಆಸ್ತಿಕರ ಪಾಲಿನ ಪವಿತ್ರ ಕ್ಷೇತ್ರಗಳಾಗಿವೆ. ಹಾಗಾಗಿ ಕೊಡಗು ಮಾತ್ರವಲ್ಲದೆ ವಿವಿಧೆಡೆಯಿಂದ ಭಕ್ತರು ಈ ದೇವಾಲಯಗಳಿಗೆ ಆಗಮಿಸುತ್ತಾರೆ. ಪ್ಯಾಕೇಜ್ ಟೂರ್ ಆಯೋಜಿಸುವವರು ತಮ್ಮ ಪ್ಯಾಕೇಜ್‌ನಲ್ಲಿ ಈ ದೇವಾಲಯಗಳ ಭೇಟಿಯನ್ನೂ ಸೇರಿಸಿಕೊಂಡಿರುತ್ತಾರೆ. ಇವುಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ತೆಗೆದು ಪುಣ್ಯ ತೀರ್ಥಕ್ಷೇತ್ರಗಳಾಗಿಯೇ ಇರುವಂತೆ ನೋಡಿಕೊಳ್ಳಬೇಕು ಎನ್ನುವ ಸ್ಥಳೀಯರ ಬೇಡಿಕೆ ಮಧ್ಯೆಯೇ ಈ ದೇವಾಲಯಗಳ ಆದಾಯ ಜಾಸ್ತಿ ಆಗುವಲ್ಲಿ ಪ್ರವಾಸಿಗರ ಕಾಣಿಕೆಯನ್ನೂ ಪರಿಗಣಿಸದೆ ಬಿಡುವಂತಿಲ್ಲ.
ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನಕ್ಕೆ 2019-20ರಲ್ಲಿ 1.86 ಕೋಟಿ ರೂ., 2020-21ರಲ್ಲಿ 1.07 ಕೋಟಿ ರೂ., 2021-22ರಲ್ಲಿ 1.42 ಕೋಟಿ ರೂ., 2022-23ರಲ್ಲಿ 2.96 ಕೋಟಿ ರೂ. 2023-24ರಲ್ಲಿ 2.43 ಕೋಟಿ ರೂ., ಹಾಗೂ 2024-25ರಲ್ಲಿ 2.42 ಕೋಟಿ ರೂ. ಸೇರಿದಂತೆ ಒಟ್ಟು 12.17 ಕೋಟಿ ರೂ. ಆದಾಯ ಬಂದಿದೆ. 2023-24ಕ್ಕೆ ಹೋಲಿಸಿದರೆ 2024-25ರಲ್ಲಿ ಆದಾಯ ಸ್ವಲ್ಪ ಇಳಿಕೆ ಕಂಡಿದೆ.
ಕೊಡಗನ್ನು ಆಳಿದ ಲಿಂಗಾಯಿತ ಅರಸರ ಜತೆ ಇತಿಹಾಸದ ನಂಟು ಹೊಂದಿರುವ ಮಡಿಕೇರಿ ನಗರದಲ್ಲಿರುವ ವಿಶಿಷ್ಟ ಇಂಡೋ ಸಾರ್ಸನಿಕ್ ವಾಸ್ತು ಶೈಲಿಯ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ 2019-20ರಲ್ಲಿ 55.7 ಲಕ್ಷ ರೂ., 2020-21ರಲ್ಲಿ 18.75 ಲಕ್ಷ ರೂ., 2021-22ರಲ್ಲಿ 10.04 ಲಕ್ಷ ರೂ., 2022-23ರಲ್ಲಿ 62.22 ಲಕ್ಷ ರೂ., 2023-24ರಲ್ಲಿ 68.81 ಲಕ್ಷ ರೂ. ಹಾಗೂ 2024-25ರಲ್ಲಿ 91.10 ಲಕ್ಷ ಸೇರಿದಂತೆ ಒಟ್ಟು 3.07 ಕೋಟಿ ರೂ. ಆದಾಯ ಬಂದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದ ಪ್ರಮಾಣ ಜಾಸ್ತಿ ಆಗಿದೆ.
ಕೊಡಗಿನ ಮಳೆ ದೇವರು ಎಂದೇ ಪ್ರತೀತಿ ಇರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ 2019-20ರಲ್ಲಿ 26.79 ಲಕ್ಷ ರೂ., 2020-21ರಲ್ಲಿ 21.07 ಲಕ್ಷ ರೂ., 2021-22ರಲ್ಲಿ 18.43 ಲಕ್ಷ ರೂ., 2022-23ರಲ್ಲಿ 29.81 ಲಕ್ಷ ರೂ., 2023-24ರಲ್ಲಿ 28.11 ಲಕ್ಷ ರೂ. ಹಾಗೂ 2024-25ರಲ್ಲಿ 29.65 ಲಕ್ಷ ರೂ. ಸೇರಿದಂತೆ ಒಟ್ಟು 1.53 ಕೋಟಿ ರೂ. ಆದಾಯ ಬಂದಿದೆ. 2023-24ಕ್ಕೆ ಹೋಲಿಸಿದರೆ 2024-25ರ ಆದಾಯದಲ್ಲಿ ಅಲ್ಪ ಏರಿಕೆ ಕಾಣಬಹುದಾಗಿದೆ.
ಕೊಡಗಿಗೆ ಆಗಮಿಸುವ ಪ್ರವಾಸಿಗರ ಪೈಕಿ ಬಹುತೇಕರು ಭಾಗಮಂಡಲ, ತಲಕಾವೇರಿ ಹಾಗೂ ಮಡಿಕೇರಿ ಓಂಕಾರೇಶ್ವರ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಹಾಗಾಗಿ ಪ್ರವಾಸಿಗರ ಮೂಲಕವೂ ಈ ಎರಡು ದೇವಾಲಯಕ್ಕೆ ಆದಾಯ ಬಂದಿರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ನೀಡುತ್ತಾರೆ ಅಧಿಕಾರಿಗಳು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ಶ್ರೀ ಓಂಕಾರೇಶ್ವರ ದೇವಾಲಯ ಮತ್ತು ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ. ಪ್ರತಿ ವರ್ಷ ಅಕ್ಟೋಬರ್ 17ರಿಂದ ನವೆಂಬರ್ 17ರ ತನಕ ಒಂದು ತಿಂಗಳ ಕಾಲ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂದರ್ಭ ಹೆಚ್ಚಿನ ಭಕ್ತರು ಆಗಮಿಸುವುದರಿಂದ ದೊಡ್ಡ ಮಟ್ಟದ ಕಾಣಿಕೆ ಈ ಅವಧಿಯಲ್ಲೇ ಸಂಗ್ರಹ ಆಗುತ್ತದೆ.
ದೇವಾಲಯಕ್ಕೆ ಆಗಮಿಸುವ ಭಕ್ತರು ತಾವು ನಂಬಿದ ದೇವರಿಗಾಗಿ ಕೊಡುವ ಕಾಣಿಕೆ, ದೇಣಿಗೆ, ಹರಕೆ ಸೇವೆ ಇತ್ಯಾದಿಗಳ ಮೂಲಕ ದೇಗುಲಗಳಿಗೆ ಆದಾಯ ಬರುತ್ತದೆ. ದೇವಾಲಯಕ್ಕೆ ಬರುವ ಯಾವುದೇ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಸಂದಾಯ ಮಾಡುವುದಿಲ್ಲ ಎನ್ನುವುದು ಧಾರ್ಮಿಕ ದತ್ತಿ ಇಲಾಖಾ ಅಧಿಕಾರಿಗಳ ಸ್ಪಷ್ಟನೆ ಆಗಿದೆ. ಇದರ ಬದಲು ದೇವಾಲಯದ ಆದಾಯವನ್ನು ಆಯಾಯ ದೇವಾಲಯಗಳ ಬ್ಯಾಂಕ್ ಖಾತೆಯ ನಿಧಿಗೆ ಜಮಾ ಮಾಡಲಾಗುತ್ತದೆ.
ಈ ರೀತಿಯಲ್ಲಿ ದೇವಾಲಯ ಖಾತೆಗೆ ಜಮಾ ಆಗುವ ಆದಾಯದ ಮೊತ್ತದ ಬಳಕೆ ಬಗ್ಗೆ ಸ್ಥಳೀಯರನ್ನೊಳಗೊಂಡAತೆ ರಚಿಸಲಾಗಿರುವ 9 ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ದೇವಾಲಯದ ವಾರ್ಷಿಕ ಆಯವ್ಯಯ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವುದು ಇತ್ಯಾದಿಗಳ ಕುರಿತಂತೆ ಚರ್ಚಿಸಿ ಈ ಸಮಿತಿ ನಿರ್ಣಯ ಕೈಗೊಳ್ಳುತ್ತದೆ. ಉಳಿಯುವ ಮೊತ್ತವನ್ನು ದೇವಾಲಯದ ನಿಶ್ಚಿತ ಠೇವಣಿ ಅಥವಾ ಉಳಿತಾಯ ಖಾತೆಯಲ್ಲಿ ನಿರ್ವಹಿಸಲಾಗುತ್ತದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿ ಇರುವ ದೇವಾಲಯಗಳನ್ನು ಅವುಗಳ ವಾರ್ಷಿಕ ಆದಾಯದ ಆಧಾರದಲ್ಲಿ ಮೂರು ವರ್ಗಗಳನ್ನಾಗಿ ವಿಭಾಗಿಸಲಾಗಿದೆ. ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವ ದೇವಾಲಯಗಳು ಎ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಈ ದೇವಾಲಯಗಳಿಗೆ ಭಕ್ತರ ಸಂಖ್ಯೆ ಹೆಚ್ಚು ಇರುತ್ತದೆ. ಉತ್ತಮ ಸೌಲಭ್ಯಗಳೂ ಇಲ್ಲಿ ಕಲ್ಪಿಸಲಾಗಿರುತ್ತದೆ.
ಸರ್ಕಾರದಿಂದ ಹೆಚ್ಚಿನ ಮೇಲ್ವಿಚಾರಣೆಯೂ ನಡೆಯುತ್ತದೆ. 5ರಿಂದ 25 ಲಕ್ಷ ರೂ. ಒಳಗಿನ ವಾರ್ಷಿಕ ಆದಾಯದ ದೇವಾಲಯಗಳು ಬಿ ವರ್ಗಕ್ಕೆ ಬರುತ್ತದೆ. 5 ಲಕ್ಷಕ್ಕಿಂದ ಕಡಿಮೆ ವಾರ್ಷಿಕ ಆದಾಯದ ದೇವಾಲಯಗಳನ್ನು ಸಿ ಗುಂಪಿಗೆ ಸೇರಿಸಲಾಗಿದೆ. ಇವು ಸಣ್ಣ ದೇವಸ್ಥಾನಗಳಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ದೇವಾಲಯಗಳ ವರ್ಗೀಕರಣಕ್ಕೆ ಆದಾಯ ಮುಖ್ಯವಾದರೂ ಭಕ್ತರ ಸಂಚಾರ, ದೇವಸ್ಥಾನದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ, ಆಸ್ತಿ ಮತ್ತು ಭೂಮಿ, ಉತ್ಸವಗಳ ಪ್ರಮಾಣವನ್ನೂ ಪರಿಗಣಿಸಲಾಗುತ್ತದೆ.
"

ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಾರ್ಷಿಕವಾಗಿ 10 ಲಕ್ಷ ರೂ. ಮೇಲ್ಪಟ್ಟು ಆದಾಯ ಹೊಂದಿರುವ ಸಂಸ್ಥೆಗಳ ನಿವ್ವಳ ಆದಾಯದ ಮೇಲೆ ಶೇ.10, ವಾರ್ಷಿಕವಾಗಿ 5 ಲಕ್ಷಗಳಿಂದ 10ಲಕ್ಷ ರೂವರೆಗೆ ಆದಾಯ ಹೊಂದಿರುವ ಸಂಸ್ಥೆಗಳ ನಿವ್ವಳ ಆದಾಯದ ಮೇಲೆ ಶೇ.5ರಷ್ಟನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ (ಕಾಮನ್ ಫೂಲ್ ಫಂಡ್) ಬಳಸಿಕೊಳ್ಳಲಾಗುತ್ತದೆ. ಈ ನಿಧಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಲ್ಲಿರುವಂತೆ ವಿವಿಧ ಉದ್ದೇಶಗಳನ್ವಯ ಬಳಸಿಕೊಳ್ಳಲು ಅವಕಾಶವಿದ್ದು, ಅದರಂತೆ ವಿನಿಯೋಗಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net