ಸರ್ವಶಕ್ತಿ ಸಂಪನ್ನೆ ಭದ್ರಕಾಳೇಶ್ವರಿ

ಭದ್ರಕಾಳೇಶ್ವರಿ ದೇವಾಲಯದ ಹೊರನೋಟ.
ಭದ್ರಕಾಳೇಶ್ವರಿ ದೇವಾಲಯದ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಹೋಬಳಿಯ ಕೆದಕಲ್ ಗ್ರಾಮ ಪಂಚಾಯಿತಿ
  • ಹಾಲೇರಿ ಗ್ರಾಮ
ಸುಂಟಿಕೊಪ್ಪ: ಹೋಬಳಿಯ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಗ್ರಾಮದಲ್ಲಿ ನೆಲೆನಿಂತಿರುವ ಭದ್ರಕಾಳೇಶ್ವರಿ ಭಕ್ತರ ಬೇಡಿಕೆಗಳನ್ನುೀಡೇರಿಸುವ ಮೂಲಕ ಶಕ್ತಿ ಸ್ವರೂಪಿಣಿಯಾಗಿದ್ದಾಳೆ.
ಮಕ್ಕಳಾಗದವರಿಗೆ ಸಂತಾನ ಭಾಗ್ಯ, ಉತ್ತಮ ಬೆಳೆ ಪಡೆಯಲು, ಪ್ರಕೃತಿ ವಿಕೋಪ ತಡೆಯುವುದು, ಕೃಷಿಕರ ಬೇಡಿಕೆ.. ಹೀಗೆ ಹಲವು ಬೇಡಿಕೆಗಳನ್ನು ದೇವಿ ಈಡೇರಿಸಿರುವ ಹಲವು ಉದಾಹರಣೆಗಳಿದ್ದು, ಇಂದಿಗೂ ಭಕ್ತರು ವಿವಿಧೆಡೆಯಿಂದ ಆಗಮಿಸಿ ಭಕ್ತಿಯಿಂದ ಬೇಡುವ ವಾಡಿಕೆ ಚಾಲ್ತಿಯಲ್ಲಿದೆ.
ದೇವಾಲಯದ ಇತಿಹಾಸ: ಶತಮಾನಗಳ ಹಿಂದೆ ಹಾಲೇರಿ ವಂಶಸ್ಥರು ಗ್ರಾಮಕ್ಕೆ ಪೂಜೆ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದರು ಎಂಬುದು ಈಗ ಇತಿಹಾಸ. ಆ ಬಳಿಕ ದೇವಾಲಯ ನಿರ್ಮಾಣ ಮಾಡಲಾಗಿ ಪೂಜೆ ಪುರಸ್ಕಾರ ಆರಂಬವಾಯಿತು. ಕಾಲಕ್ರಮೇಣ ಅದು ಭದ್ರಕಾಳೇಶ್ವರಿ ದೇವಾಲಯವಾಗಿ ರೂಪುಗೊಂಡಿತು. 2018ರಲ್ಲಿ ಮಹಾಮೇಘಾ ಸ್ಫೋಟ ಸಂಭವಿಸಿದಾಗ ಭಾರಿ ಪ್ರವಾಹ ಎದುರಾಯಿತು. ಆ ಸಂದರ್ಭದಲ್ಲಿ ಗ್ರಾಮದ ಸಂಪರ್ಕ ಕಡಿದುಕೊಂಡಾಗ ದೇವಿಯ ಮಹಿಮೆ ಮತ್ತು ಪವಾಡ ಇಲ್ಲಿನ ಜನರನ್ನು ಸಂರಕ್ಷಿಸಿತು ಎಂಬುದು ಈಗ ಇತಿಹಾಸ.
ಇದನ್ನು ದೇವಾಲಯದ ಆರ್ಚಕರು ಹಾಗೂ ಗ್ರಾಮಸ್ಥರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಗ್ರಾಮಕ್ಕೆ ಗ್ರಾಮವೇ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆಯಿತಾದರೂ ದೇವಾಲಯದಲ್ಲಿ ಪೂಜೆ ನಿಂತಿರಲಿಲ್ಲ. ಆರ್ಚಕರು ನಂಬಿಕೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿದ್ದು ಮನೆ ಮಾತಾಗಿದೆ. ಅಲ್ಲದೆ ದೇವಿಯ ಮಹಿಮೆ ಜನರಲ್ಲಿ ಪೂರ್ಣ ಪ್ರಮಾಣದಲ್ಲಿ ವಿಶ್ವಾಸ ಮೂಡಿಸಿದೆ ಎಂದರೆ ತಪ್ಪಾಗಲಾರದು.
ಈ ಹಿಂದೆ ಪೂರ್ವಿಕರು ಬೇಟೆಯಾಡಿ ಬಂದ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬಲಿ ಕೊಡುವುದು ವಾಡಿಕೆ. ಗ್ರಾಮದ ಒಳಿತಿಗೆ ನಂಬಿ ಬರುವ ಭಕ್ತರ ಬೇಡಿಕೆಗಳನ್ನು ದೇವಿ ಈಡೇರಿಸುತ್ತಾಳೆ ಎನ್ನುವುದಕ್ಕೆ 2018 ರಲ್ಲಿ ಸಂಭವಿಸಿದ ಭೀಕರ ಜಲಪ್ರಳಯವೇ ಸಾಕ್ಷಿ. ಭೀಕರ ಜಲಪ್ರಳಯ ಸಂಭವಿಸಿದಾಗ ದೇವಸ್ಥಾನದ ಆಸುಪಾಸು ಸಂಪೂರ್ಣ ಹಾನಿಗೀಡಾಗಿದ್ದರೂ ದೇವಸ್ಥಾನ ಒಂದು ಇಂಚು ಭೂಮಿಗೆ ಯಾವುದೇ ರೀತಿಯ ಹಾನಿ ಆಗಿರಲಿಲ್ಲ. ಇದು ಪವಾಡ ಸದೃಶ್ಯವೇ ಸರಿ ಎನ್ನುತ್ತಾರೆ ಗ್ರಾಮಸ್ಥರು.
ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ 2 ವರ್ಷಕ್ಕೋಮ್ಮೆ ವಾರ್ಷಿಕ ಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಈ ಸಂದರ್ಭ ಹಾಲೇರಿ, ಕೊಪ್ಪತ್ತೂರು, ಕಾಂಡನಕೊಲ್ಲಿ, ಎಮ್ಮತ್ತಾಳು ಹಾಗೂ ಕಡಂದಾಳು ಗ್ರಾಮಗಳ ಜನತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಾಕಷ್ಟು ಜನರು ತಮ್ಮ ಹರಕೆಗಳನ್ನು ಈ ಸಂದರ್ಭ ಸಲ್ಲಿಸುವುದು ವಾಡಿಕೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಗ್ರಾಮದಲ್ಲಿ ನೆಲೆಸಿರುವವರು ಗ್ರಾಮದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆಯನ್ನು ಸಮರ್ಪಿಸುತ್ತಾರೆ. ದೇವಿಯಲ್ಲಿ ನಂಬಿಕೆ ಇರಿಸಿ ಬರುವವರಿಗೆ ದೇವಿ ನಂಬಿಕೆಗೆ ಕಿಂಚಿತ್ತೂ ಕುತ್ತು ಬಾರದಂತೆ ನೋಡಿಕೊಳ್ಳುತ್ತಾಳೆ.
ತಲುಪುವ ಮಾರ್ಗ: ಮಡಿಕೇರಿಯಿಂದ ಸುಂಟಿಕೊಪ್ಪ್ಪಕ್ಕೆ ಆಗಮಿಸುವಾಗ ಮಾರ್ಗಮಧ್ಯೆ ಕೆದಕಲ್ ಗ್ರಾಮ ಸಿಗಲಿದೆ. ಅಲ್ಲಿಂದ ಎರಡು ಕಿ.ಮೀ ದೂರ ಕ್ರಮಿಸಿದರೆ ಭದ್ರಕಾಳೇಶ್ವರಿ ದೇವಾಲಯ ಸಿಗಲಿದೆ. ಸುಂಟಿಕೊಪ್ಪದಿಂದ 6 ಕಿ.ಮೀ.ದೂರ ಕ್ರಮಿಸಿ ಬಲಭಾಗಕ್ಕೆ ತಿರುಗಿ 2.ಕಿ.ಮೀ ಕ್ರಮಿಸಿದರೆ ದೇವಿಯ ದೇವಾಲಯ ಸಿಗಲಿದೆ.
ದೇವಿಯನ್ನು ನಂಬಿ ಬರುವ ಭಕ್ತರಿಗೆ ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವುದಕ್ಕೆ ಸಾಕಷ್ಟು ಪುರಾವೆ ಇವೆ. 2018 ರ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದ ಸಂದರ್ಭ ಗ್ರಾಮವೇ ಗುಳೇ ಹೋಯಿತು. ಆದಾಗ್ಯೂ ದೇವಿಯ ಅಪಾರ ಶಕ್ತಿಯಿಂದ ನನ್ನ ಮತ್ತು ಕುಟುಂಬವನ್ನು ಕಾಪಾಡಿದಳು. ಭಕ್ತಿಯಿಂದ ಬೇಡಿದರೆ ದೇವಿ ಎಲ್ಲವನ್ನೂ ಈಡೇರಿಸುತ್ತಾಳೆ.
ಸದಾನಂದ ಭಟ್ ಆರ್ಚಕ, ಭದ್ರಕಾಳೇಶ್ವರಿ ದೇವಾಲಯ
2018ರ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಮೇಘಸ್ಪೋಟದಿಂದ ಹಾಲೇರಿ ಗ್ರಾಮದ ಜನತೆಯು ಸಂತ್ರಸ್ತರ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಯಿತು. ದೇವಾಲಯದ ಅರ್ಚಕರು ಮಾತ್ರ ದೇವಿಗೆ ಆರಾಧನೆ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯ ಎಂದು ತಿಳಿದು ಕರ್ತವ್ಯ ನಿರ್ವಹಿಸಿದರು. ಅಲ್ಲದೆ ಭದ್ರಕಾಳೇಶ್ವರಿ ಬನ ಅಂದಾಜು 9 ಎಕರೆಗೂ ಮೇಲಿದ್ದು, ಈ ಭೂಮಿಗೆ ಹಾನಿ ಉಂಟಾಗದಂತೆ ದೇವಿ ಕಾಯುತ್ತಿದ್ದಾಳೆ.
ಬಿ.ಎ.ತಮ್ಮಪ್ಪ ಹಾಲೇರಿ ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net