ಸೋಮವಾರಪೇಟೆ : ಸ್ವಯಂ ಅಧ್ಯಯನಶೀಲತೆಯನ್ನು ಅಳವಡಿಸಿಕೊಂಡಿರುವ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅಭಿಪ್ರಾಯಿಸಿದರು.
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಆಶೀರ್ವಾದ ದಿನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಉತ್ತಮವಾಗಿ ತಯಾರಿ ನಡೆಸಿದ್ದಾರೆ. ಯಾರಿಗೂ ಪರೀಕ್ಷಾ ಭಯ ಇಲ್ಲ. ಈಗಾಗಲೇ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಬರೆದಿದ್ದಾರೆ. ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲಿ ಮೊದಲ ಅಥವಾ ಎರಡನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಳ್ಳಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಪ್ರಯತ್ನ ಮಾಡಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜಿಲ್ಲೆಗೆ ಮತ್ತು ತಾವು ಓದಿದ ಶಾಲೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು, ಸಮಯಪಾಲನೆ, ಗುರಿಯೊಂದಿಗೆ ಕಲಿಕೆ ಮುಂದುವರಿಸಬೇಕು. ವಿದ್ಯಾಭ್ಯಾಸ ಮುಗಿಯುವ ತನಕ ಮೊಬೈಲ್‌ನಿಂದ ಆದಷ್ಟೂ ದೂರವಿರಬೇಕು. ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ, ಸಹಕಾರ ನೀಡಬೇಕು ಎಂದು ತಿಳಿಸಿದರು.
ಭಯಪಡಬೇಡಿ:
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ, ಅದು ನಿಮ್ಮ ಪರಿಶ್ರಮವನ್ನು ತೋರಿಸುವ ಅವಕಾಶ ಎಂದರು. ಗುರಿ ಸ್ಪಷ್ಟವಾಗಿರಲಿ, ಸಮಯದ ಮೌಲ್ಯ ತಿಳಿದುಕೊಳ್ಳಿ. ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸ ನಿಮ್ಮ ಯಶಸ್ಸಿನ ಗುಟ್ಟು. ನೀವು ಸಾಧಿಸಿದರೆ ನಿಮ್ಮ ಕುಟುಂಬಕ್ಕೂ ಸಂಸ್ಥೆಗೂ ಹೆಮ್ಮೆ ದೊರಕುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಕ್ರೀಡೆ, ಕಲಿಕೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದ ಕುವೆಂಪು ಶಾಲೆಯ ಸಿ.ಎಸ್.ಆದ್ವಿ, 5ನೇ ರ‌್ಯಾಂಕ್ ಪಡೆದ ಕೆ.ಸಿ.ಪಂಚಮಿ, 7ನೇ ರ‌್ಯಾಂಕ್ ಪಡೆದ ತೇಜಸ್ವಿನಿ ಅವರುಗಳ ಪೋಷಕರನ್ನು ಸನ್ಮಾನಿಸಿಲಾಯಿತು.
ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಕಾರ್ಯದರ್ಶಿ ಎನ್.ಬಿ.ಗಣಪತಿ, ಖಜಾಂಚಿ ಲಿಂಗರಾಜು, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ ಸಂಸ್ಥೆಯ ಪ್ರಾಂಶುಪಾಲರಾದ ಮಿಲ್ಗ್ರೆಡ್ ಗೊನ್ಸಾಲ್ವೆಸ್ ಮತ್ತು ನಿರ್ದೇಶಕರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕಮ ನಡೆಯಿತು.
ವಿದ್ಯಾರ್ಥಿನಿಯರಾದ ನಮನ, ಸುಹೈಲಾ, ದ್ವಿತಿ, ವೈಷ್ಣವಿ, ಕೀರ್ತನಾ, ಸ್ವಸ್ಥಿ, ಜ್ಞಾನ ಕಾರ್ಯಕ್ರಮ ನಿರ್ವಹಿಸಿದರು.