ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಮುಗ್ಧ ಮನಸ್ಸುಗಳಲ್ಲಿ ಭಾರತೀಯ ಸಂಸ್ಕಾರ, ಉತ್ತಮ ನೈತಿಕ ಮೌಲ್ಯಗಳು ಹಾಗೂ ದೇಶಭಕ್ತಿಯನ್ನು ಬಿತ್ತುವ ಸದುದ್ದೇಶದಿಂದ ಮಡಿಕೇರಿ ನಗರದ ಸಮರ್ಥ ವಸತಿಯಲ್ಲಿ ನೂತನ ಬೃಂದಾವನ ಬಾಲಗೋಕುಲ ಶಾಖೆಯನ್ನು ಈಚೆಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಮುಖರಾದ ಮಂಜುನಾಥ್ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಸಂಸ್ಕಾರ ಕೇಂದ್ರಗಳು ಇಂದಿನ ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪುಟಾಣಿಗಳಿಂದ ಶ್ಲೋಕ ಮತ್ತು ಕಥಾ ಸಮಯದ ಕಾರ್ಯಕ್ರಮಗಳು ಜರುಗಿದವು. ಗೌರಿ ಅವರ ನಿತ್ಯ ಶ್ಲೋಕ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರುತಿ ಏಕಲವ್ಯನ ಕಥೆಯನ್ನು ರೋಚಕವಾಗಿ ಪ್ರಸ್ತುತಪಡಿಸಿದರು. ಮೇಘ ಭಗವದ್ಗೀತೆ ಪಠಣ ಮಾಡಿದರು. ಸುಜಾತ ನೇತೃತ್ವದಲ್ಲಿ ಹನುಮಾನ್ ಚಾಲೀಸ ಭಜನೆ ನಡೆಯಿತು. ದಿನೇಶ್ ನೇತೃತ್ವದಲ್ಲಿ ಮಕ್ಕಳಿಗೆ ವಿವಿಧ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಯಿತು. ರಾಧಿಕಾ ಈ ಸಂದರ್ಭ ಇದ್ದರು.
ನೂತನ ಬಾಲಗೋಕುಲ ಶಾಖೆಯಲ್ಲಿ ಪ್ರತಿ ಶನಿವಾರ ಸಂಜೆ 4 ರಿಂದ 5ರವರೆಗೆ ತರಗತಿಗಳು ನಡೆಯಲಿವೆ. ಇಲ್ಲಿ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶ್ಲೋಕ ಪಠಣ, ಭಗವದ್ಗೀತೆ, ನೈತಿಕ ಕಥೆಗಳು, ಸಾಂಪ್ರದಾಯಿಕ ಆಟಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಕಲಿಸಿಕೊಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.