ಎದೆಹಾಲು ಮಗುವಿನ ರೋಗ ನಿರೋಧಕ ಶಕ್ತಿ

ನಗರದ ರಾಘವೇಂದ್ರ ದೇವಸ್ಥಾನದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸವಿತಾ ಕೀರ್ತನ್, ಡಾ.ಸುಕೃತಾ, ರಂಜಿತ್ ಇತರರಿದ್ದರು.
ನಗರದ ರಾಘವೇಂದ್ರ ದೇವಸ್ಥಾನದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸವಿತಾ ಕೀರ್ತನ್, ಡಾ.ಸುಕೃತಾ, ರಂಜಿತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎದೆಹಾಲು ಮಗುವಿನ ರೋಗ ನಿರೋಧಕ ಶಕ್ತಿ

ಮಡಿಕೇರಿ: ತಾಯಿಯ ಎದೆಹಾಲು ಮಗುವಿಗೆ ಕೇವಲ ಆಹಾರವಲ್ಲ. ಅದು ಮಗುವಿನ ಆರೋಗ್ಯ, ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿಗೆ ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಹೇಳಿದರು.

ನಗರದ ರಾಘವೇಂದ್ರ ದೇವಸ್ಥಾನದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಮತ್ತು ಎದೆಹಾಲಿನ ಮಹತ್ವದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ನೀಡಲು ಪ್ರಾರಂಭಿಸಬೇಕು. ಮೊದಲ ಆರು ತಿಂಗಳು ಕೇವಲ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಎರಡು ವರ್ಷದವರೆಗೆ ಎದೆಹಾಲು ಮುಂದುವರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಶಿಫಾರಸು ಮಾಡಿದೆ ಎಂದು ತಿಳಿಸಿದರು.
ಎದೆಹಾಲು ತಾಯಿ-ಮಗುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಮಗುವಿನ ದೇಹದ ಉಷ್ಣತೆ ಕಾಪಾಡಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಮೊದಲ ಆರು ತಿಂಗಳಲ್ಲಿ ನೀರು, ಜೇನುತುಪ್ಪ ಅಥವಾ ಇತರ ಆಹಾರ ನೀಡಬಾರದು. ಎದೆಹಾಲಿನಲ್ಲಿರುವ ಪ್ರತಿಕಾಯಗಳು ಅತಿಸಾರ, ನ್ಯುಮೋನಿಯಾದಂತಹ ಸೋಂಕುಗಳಿಂದ ಮಗುವನ್ನು ರಕ್ಷಿಸುತ್ತವೆ. ಜೊತೆಗೆ ಮೆದುಳಿನ ಬೆಳವಣಿಗೆ ಮತ್ತು ಅಪೌಷ್ಟಿಕತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.
ವೈದ್ಯೆ ಡಾ.ಸುಕೃತಾ ಅವರು ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ನಡೆಸಿ ಚುಚ್ಚುಮದ್ದು ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ತೂಕ-ಎತ್ತರ ಪರಿಶೀಲಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ರಂಜಿತ್, ಆಶಾ ಕಾರ್ಯಕರ್ತೆ ಸಾಜಿದಾ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ಅನಿತಾ ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net