ಅಂತರ್ಜಾಲ ಬಳಕೆ, ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯ

ನಗರದ ಜಿಲ್ಲಾಧಿಕಾರಿ ಅವರ ಸಭಾಂಗಣದಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಆರ್.ಐಶ್ವರ್ಯ ಮಾತನಾಡಿದರು. ಸಂಗೀತಾ, ಲಕ್ಷ್ಮೀಕಾಂತ ತಳವಾರ್ ಇದ್ದರು.
ನಗರದ ಜಿಲ್ಲಾಧಿಕಾರಿ ಅವರ ಸಭಾಂಗಣದಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಆರ್.ಐಶ್ವರ್ಯ ಮಾತನಾಡಿದರು. ಸಂಗೀತಾ, ಲಕ್ಷ್ಮೀಕಾಂತ ತಳವಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂತರ್ಜಾಲ ಬಳಕೆ, ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯ
  • ಜಾಗೃತಿ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ
ಮಡಿಕೇರಿ: ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸರ್ಕಾರಿ ಸೇವೆಗಳು ಹಾಗೂ ಕೆಲಸಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಜನಸಾಮಾನ್ಯರಿಗೆ ಒದಗಿಸಲು ಪೂರಕವಾಗಿದೆ. ಅವುಗಳ ಮಾಹಿತಿಗಳು ಅಂತರ್ಜಾಲದಲ್ಲಿ ಸೋರಿಕೆಯಾಗದಂತೆ ಸುರಕ್ಷಿತ ಕ್ರಮ ಅನುಸರಿಸುವುದು ಅತ್ಯಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.
ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಅಂತರ್ಜಾಲ ಸುರಕ್ಷತೆಯ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ಅತ್ಯಂತ ಸುಲಭವಾಗಿದೆ. ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕರ್‌ಗಳು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದಿದಾಗ ತಮಗಾದ ಮೋಸದ ಬಗ್ಗೆ ದೂರು ನೀಡಿ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಆರ್.ಐಶ್ವರ್ಯ ವಿವರಿಸಿದರು.
ಅಧಿಕಾರಿಗಳು ಕಚೇರಿಯ ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಅಂತರ್ಜಾಲ ಬಳಕೆಯ ಉಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಅದರ ಅನಾನುಕೂಲತೆಗಳ ಬಗ್ಗೆ ಜಾಗೃತಿ ವಹಿಸಬೇಕು. ಆನ್‌ಲೈನ್ ವ್ಯವಹಾರ, ಬ್ಯಾಂಕಿಂಗ್ ಉಪಯೋಗಿಸುವಾಗ ಎಚ್ಚರ ವಹಿಸಬೇಕು. ಕೆಲವೊಮ್ಮೆ ಅಪರಿಚಿತ ಮೊಬೈಲ್ ನಂಬರ್‌ಗಳ ಬಗ್ಗೆಯೂ ಅಧಿಕಾರಿಗಳು ಗಮನವಹಿಸಬೇಕು. ಯಾವುದೇ ಮಾಹಿತಿ ನೀಡುವಾಗ ಎಚ್ಚರ ವಹಿಸಬೇಕು ಎಂದರು.
ಎನ್‌ಐಸಿ ಅಧಿಕಾರಿ ಸಂಗೀತಾ ಮಾತನಾಡಿ, ಸುರಕ್ಷಿತ ಅಂತರ್ಜಾಲ ದಿನ ಪ್ರಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಪೇಸ್‌ಬುಕ್, ಇನ್ಸ್ಟ್ಸಾಗ್ರಾಮ್ ಬಳಸುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಾಸ್‌ವರ್ಡ್‌ಗಳನ್ನು ಯಾರ ಬಳಿಯು ಹಂಚಿಕೊಳ್ಳಬಾರದು. ಇದರಿಂದ ವಂಚಕರು ಮಾಹಿತಿ ಕದಿಯುವ ಸಂದರ್ಭಗಳು ಬರುತ್ತವೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವ ಡಿವೈಸ್‌ಗಳನ್ನು ಬಳಸಬೇಡಿ, ಇತರರ ಮೊಬೈಲ್ ಯುಎಸ್‌ಬಿ ಕೇಬಲ್‌ಗಳನ್ನು ಉಪಯೋಗಿಸುವಾಗ ಎಚ್ಚರ ವಹಿಸಬೇಕು. ಅಲ್ಲದೇ ನಮ್ಮ ದಿನನಿತ್ಯದ ಜೀವನದಲ್ಲಿ ಇಂಟರ್ನೆಟ್ ಬಳಕೆ, ಅಂತರ್ಜಾಲದ ಸುರಕ್ಷಿತ ಬಳಕೆ, ಸಾಮಾನ್ಯ ಸೈಬರ್ ಬೆದರಿಕೆಗಳು, ಸೈಬರ್ ನೈರ್ಮಲ್ಯ ಅಭ್ಯಾಸಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಕಾರ್ಯವಿಧಾನ, ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಜಾಗೃತಿ ಸಂಪನ್ಮೂಲಗಳ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ಡಿವೈಎಸ್ಪಿ ಲಕ್ಷ್ಮೀಕಾಂತ ತಳವಾರ್, ಡಿವೈಒ ಸಿಂಧೂರ್ ರಾಮಯ್ಯ ತಳವಾರ್, ಎಂಜಿನಿಯರ್ ಎಸ್.ತೇಜಶ್, ನೆಟ್‌ವರ್ಕ್ ಎಂಜಿನಿಯರ್ ಕೆ.ಆರ್.ಆಕಾಶ್, ಸುಯೋಗ್ ಸ್ಪಿನ್ಸನ್, ಈ-ಆಫೀಸ್ ಇಲಾಖಾಧಿಕಾರಿ ಅಜಯ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net