ಮಡಿಕೇರಿಯಲ್ಲಿ ಗಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಮಡಿಕೇರಿ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಕಲಾಕೃತಿ
ಮಡಿಕೇರಿ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಕಲಾಕೃತಿ
Published on
ಮಡಿಕೇರಿ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನÀವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಶನಿವಾರ ಸಂಜೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅತ್ಯಾಕರ್ಷಕ ಪುಷ್ಪ ಪ್ರದರ್ಶನವನ್ನು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಏರ್ಪಡಿಸಲಾಗಿದೆ. ಇಂಥ ಪ್ರದರ್ಶನಗಳಿಂದ ಸ್ಥಳೀಯರು ವರ್ಷಕ್ಕೆ ಒಮ್ಮೆಯಾದರೂ ರಾಜಾಸೀಟ್ ಕಡೆ ಬರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಣ್ಣ ಬಣ್ಣದ ಹೂವುಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹೂವುಗಳನ್ನು ಬೆಳೆಯವುದರ ಕಡೆಗೆ ಚಿಂತನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿ 2 ಹೈಟೆಕ್ ಕ್ಯಾಂಟೀನ್ ಮಾಡಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಸ್ಥಗಿತಗೊಂಡಿರುವ ಪುಟಾಣಿ ರೈಲು ಸಂಚಾರವನ್ನೂ ಪುನಾರಂಭಿಸಲಾಗುವುದು. ಇಂಥ ಪ್ರದರ್ಶನ ವರ್ಷಪೂರ್ತಿ ಇರಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ನಗರ ಸಭೆ ಅಧ್ಯಕ್ಷೆ ಪಿ. ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಎಸ್.ಪಿ. ಆರ್.ಎನ್. ಬಿಂದುಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್. ಶಶಿಧರ್, ಸಹಾಯಕ ನಿದೇರ್ಶಕರಾದ ವರದರಾಜ್, ಮುತ್ತಪ್ಪ ಮತ್ತಿತರರು ಈ ಸಂದರ್ಭ ಇದ್ದರು.
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಕಲಾಕೃತಿ ಈ ವರ್ಷದ ಆಕರ್ಷಣೆ ಆಗಿದ್ದು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳನ್ನು ಬಳಸಿ 33 ಅಡಿ ಎತ್ತರ, 18 ಅಡಿ ಉದ್ದ ಹಾಗೂ 23 ಅಡಿ ಅಗಲದಲ್ಲಿ ಕಲಾಕೃತಿ ರಚಿಸಲಾಗಿದೆ. ಇದಲ್ಲದೆ ಸುಮಾರು 8 ಸಾವಿರ ಕುಂಡಗಳಲ್ಲಿ ಮತ್ತು ಬೆಡ್‌ಗಳಲ್ಲಿ ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಾಸ್, ಇಂಪೆಷಿಯನ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಸೇರಿದಂತೆ ವಿವಿಧ ಜಾತಿಯ 20 ಸಾವಿರ ಹೂವುಗಳನ್ನು ಬೆಳೆಯಲಾಗಿದೆ.
ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರ ಕಲಾಕೃತಿಗಳನ್ನು 2.5 ಅಡಿ ಮತ್ತು 2 ಅಡಿ ಎತ್ತರದಲ್ಲಿ ನಾಲ್ಕು ಕಲಾಕೃತಿಗಳು, 4.5 ಅಡಿ ಮತ್ತು 4 ಅಡಿ ಎತ್ತರದಲ್ಲಿ 2 ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.
ಸಂಗೀತ ಕಲಾಕೃತಿಗಳಾದ ತಬಲಾ, ಪಿಯಾನೋ, ಹರ್ಪ್ ಕಲಾಕೃತಿಗಳನ್ನು ವಿವಿಧ ಅಳತೆಯಲ್ಲಿ ನಿರ್ಮಿಸಲಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ಅಮರ್ ಜವಾನ್ ಕಲಾಕೃತಿಯನ್ನು 8 ಅಡಿ ಎತ್ತರದಲ್ಲಿ ವಿವಿಧ ಹೂವಿಗಳನ್ನು ಬಳಸಿ ನಿರ್ಮಿಸಲಾಗಿದೆ. ಬಗೆ ಬಗೆಯ ಹೂವುಗಳನ್ನು ಬಳಸಿ ಹಾರುವ ಹಕ್ಕಿಯ ಕಲಾಕೃತಿ, ಮೀನುಗಳ ಕಲಾಕೃತಿ, ಚಿಟ್ಟೆ, ಕರಡಿಯ ರಚನೆಯೂ ಗಮನ ಸೆಳೆಯುತ್ತಿದೆ.
ವಿವಿಧ ಕ್ಷೇತ್ರಗಳ ಗಣ್ಯರ ಕಲಾಕೃತಿಗಳನ್ನು ಹಣ್ಣು, ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶನ ಮಾಡಲಾಗಿದೆ. ಬಗೆ ಬಗೆಯ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳು, ಇಕೆಬಾನ ಹೂವಿನ ಜೋಡಣೆ ಪ್ರದರ್ಶನ ಏರ್ಪಡಿಸಲಾಗಿದೆ.
ವಿವಿಧ ಇಲಾಖೆ, ಏಜೆನ್ಸಿಗಳ 60 ಮಳಿಗೆಗಳನ್ನು ತೆರೆಯಲಾಗಿದ್ದು, ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಪ್‌ಕಾಮ್ಸ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಮಳಿಗೆಗಳು ಗಮನ ಸೆಳೆಯುತ್ತಿವೆ. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಯಂತ್ರೋಪಕರಣಗಳ ಮಾರಾಟ ಮಳಿಗೆಗಳೂ ಇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net