ಕೊಡಗು ವಿದ್ಯಾಲಯದ ಬಾಲವಾಟಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಆರೋಹಣ ಸಮಾರಂಭ ಪದವಿ ಪ್ರದಾನ ಕಾರ್ಯಕ್ರಮ ಕೊಡಗು ವಿದ್ಯಾಲಯದ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ ಶಾಲೆಯ ನಿವೃತ್ತ ಉಪಪ್ರಾಂಶಪಾಲೆ ಆಗ್ನೆಸ್ ಮುತ್ತಣ್ಣ ಮಾತನಾಡಿ ಎಲ್ಲರೂ ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವ ಹೊಂದಿರಬೇಕು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾಂದವ್ಯ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಶಿಕ್ಷಕರ ಮಾತು ವೇದವಾಕ್ಯದಂತೆ ಇದ್ದು, ಶಿಕ್ಷಕರ ಮಾರ್ಗದರ್ಶನ ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ತಮ್ಮ ಸಮಯದ ಹೆಚ್ಚಿನ ಭಾಗವನ್ನು ಶಿಕ್ಷಕರ ಜತೆಗೆ ಕಳೆಯುವುದರಿಂದ ಪೋಷಕರು ಸಹ ತಮ್ಮ ಕರ್ತವ್ಯವನ್ನು ಅರಿತು ಮಕ್ಕಳ ಶಿಕ್ಷಣದಲ್ಲಿ ಸಹಕರಿಸಬೇಕು. ಮಕ್ಕಳು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಶಾಲಾ ಪ್ರಾಶುಪಾಲೆ ಕೆ.ಎಸ್. ಸುಮಿತ್ರಾ ಮಾತನಾಡಿ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳು ಓದಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಪೋಷಕರು ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರ ವಹಿಸಬೇಕು. ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಫೋನ್ ನೀಡುವುದನ್ನು ತಪ್ಪಿಸಬೇಕು ಎಂದರು.
ಆಡಳಿತ ವ್ಯವಸ್ಥಾಪಕ ಪಿ. ರವಿ, ಸಂಯೋಜಕಿ ಕೆ.ಕೆ. ಭಾರತಿ, ಸೋನಾ ಮುತ್ತಮ್ಮ, ಎಂ.ಪಿ. ಬೊಳ್ಳಮ್ಮ, ಟಿ.ಪಿ. ರಮ್ಯಾ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಇದ್ದರು.
ಬಾಲವಾಟಿಕೆ-2 ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಜಾನಪದ ನೃತ್ಯ, ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನಗೆದ್ದರು.