ಎ.ಎಸ್. ಪೊನ್ನಣ್ಣ ಉಪಸಭಾಪತಿ

ಎ.ಎಸ್. ಪೊನ್ನಣ್ಣ
ಎ.ಎಸ್. ಪೊನ್ನಣ್ಣ
Published on
ಮಡಿಕೇರಿ:
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಈಗ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇದರಿಂದಾಗಿ ಈ ಬಾರಿಯಾದರೂ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಕೊಡಗಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ಭರವಸೆಯೂ ಹುಸಿಯಾಗಿದೆ. ಜಿಲ್ಲೆಯಿಂದ ಕನಿಷ್ಠ ಒಬ್ಬ ಶಾಸಕರಾದರೂ ಮಂತ್ರಿ ಆಗುತ್ತಾರೆ ಎಂದೇ ಬಲವಾಗಿ ನಂಬಿದ್ದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಇದರಿಂದ ನಿರಾಸರಾಗುವಂತಾಗಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಪ್ರಾಮುಖ್ಯತೆ ಹೊಂದಿರುವ ಕೊಡಗು ಜಿಲ್ಲೆಗೆ ಈ ಬಾರಿಯೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರುವುದು ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ವಿರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಅನುಭವಿ ನ್ಯಾಯವಾದಿ ಎ.ಎಸ್. ಪೊನ್ನಣ್ಣ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬಹುದು ಎನ್ನುವ ಬಹುದೊಡ್ಡ ನಿರೀಕ್ಷೆ ಇತ್ತು. ಆದರೆ, ಅವರಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೊಡಗಿನ ಜನರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.
ದೀರ್ಘಕಾಲದಿಂದ ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಐತಿಹಾಸಿಕ ಜಯ ಸಾಧಿಸಿತ್ತು. ವಿರಾಜಪೇಟೆ ಮತ್ತು ಮಡಿಕೇರಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಪುತ್ರ ಎ.ಎಸ್. ಪೊನ್ನಣ್ಣ ವಿರಾಜಪೇಟೆ ಕ್ಷೇತ್ರದಲ್ಲಿ ತಮ್ಮ ಸಂಘಟನಾತ್ಮಕ ಶಕ್ತಿ ಮತ್ತು ಕ್ರಿಯಾಶೀಲತೆಯಿಂದಾಗಿ ಗೆಲುವು ಸಾಧಿಸಿ, ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಜೀವ ತುಂಬಿದ್ದರು. ಹೀಗಾಗಿ, ಈ ಬಾರಿ ಕೊಡಗಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವುದು ಖಚಿತ ಎಂಬ ಮಾತುಗಳು ಕೇಳಿ ಬಂದಿದ್ದವು.
ಸಚಿವ ಸ್ಥಾನದ ರೇಸ್‌ನಲ್ಲಿದ್ದ ಪ್ರಬಲ ಆಕಾಂಕ್ಷಿ ಎ.ಎಸ್. ಪೊನ್ನಣ್ಣ ಕೇವಲ ಶಾಸಕರಷ್ಟೇ ಅಲ್ಲದೆ, ಹೈಕೋರ್ಟ್ನಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಕಾನೂನು ತಜ್ಞರು. ರಾಜ್ಯ ಸರ್ಕಾರಕ್ಕೆ ಹಲವು ಪ್ರಮುಖ ಕಾನೂನು ವಿಷಯಗಳಲ್ಲಿ ಸಲಹೆ ನೀಡಿದ್ದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ತಮ್ಮ ಶೈಕ್ಷಣಿಕ ಅರ್ಹತೆ, ಕಾನೂನು ಜ್ಞಾನ ಮತ್ತು ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿದ ರೀತಿಯನ್ನು ಪರಿಗಣಿಸಿ ಅವರಿಗೆ ಕಾನೂನು, ಅರಣ್ಯ ಅಥವಾ ಕಂದಾಯದAತಹ ಪ್ರಮುಖ ಸಚಿವ ಖಾತೆ ಸಿಗಲಿದೆ ಎಂದು ಬೆಂಬಲಿಗರು ಭರವಸೆ ಇಟ್ಟುಕೊಂಡಿದ್ದರು.
ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ವೇಳೆ ಜಾತಿ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಹಿರಿಯ ಶಾಸಕರ ಒತ್ತಡಗಳ ಹಿನ್ನೆಲೆಯಲ್ಲಿ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನದ ಬದಲಿಗೆ ವಿಧಾನಸಭೆಯ ಉಪಸಭಾಪತಿ ಹುದ್ದೆಯನ್ನು ನೀಡಲು ನಿರ್ಧರಿಸಿದೆ. ಇದು ಸಾಂವಿಧಾನಿಕವಾಗಿ ಮತ್ತು ಗೌರವದ ದೃಷ್ಟಿಯಿಂದ ಮಹತ್ವದ ಹುದ್ದೆಯಾಗಿದ್ದರೂ, ಶಾಸಕಾಂಗ ಆಡಳಿತ ನಡೆಸುವ ಹಾಗೂ ಜಿಲ್ಲೆಗೆ ನೇರವಾಗಿ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳನ್ನು ತರಬಲ್ಲ ಸಚಿವ ಸ್ಥಾನಕ್ಕೆ ಇದು ಪರ್ಯಾಯವಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ.
ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ ಬೆಟ್ಟಗುಡ್ಡಗಳಿಂದ ಕೂಡಿದ, ಪ್ರಾಕೃತಿಕ ವಿಕೋಪಗಳು ಮತ್ತು ಕಾಡಾನೆ-ಮಾನವ ಸಂಘರ್ಷ ಎದುರಿಸುತ್ತಿರುವ ಕೊಡಗು ಜಿಲ್ಲೆಗೆ ಪ್ರತ್ಯೇಕ ಸಚಿವರ ಅಗತ್ಯವಿತ್ತು. ಪ್ರಭಾವಿ ಜಿಲ್ಲೆಗಳಿಗೆ ಸಾಲು ಸಾಲು ಸಚಿವ ಸ್ಥಾನಗಳನ್ನು ನೀಡುತ್ತಿರುವಾಗ, ಕಾಂಗ್ರೆಸ್‌ಗೆ ಬಲವಾದ ಬೆಂಬಲ ನೀಡಿದ ಕೊಡಗನ್ನು ಮತ್ತೆ ಅಲಕ್ಷಿಸಲಾಗಿದೆ ಎಂಬ ಭಾವನೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೂಡಿದೆ.
ಬಿಜೆಪಿ ಕೋಟೆಯನ್ನು ಭೇದಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಹೈಕಮಾಂಡ್‌ನ ಈ ನಿರ್ಧಾರ ನಿರಾಸೆ ತಂದಿದೆ. ಎ.ಎಸ್. ಪೊನ್ನಣ್ಣ ಪಕ್ಷದ ಸಾಂಸ್ಥಿಕ ಶಿಸ್ತಿಗೆ ಬದ್ಧರಾಗಿ ಉಪಸಭಾಪತಿ ಹುದ್ದೆಯನ್ನು ಸ್ವೀಕರಿಸಿದ್ದರೂ, ಕೊಡಗು ಜಿಲ್ಲೆ ಸಚಿವ ಸ್ಥಾನದಿಂದ ಮತ್ತೆ ವಂಚಿತವಾಗಿರುವುದು ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಕೊಡಗಿನ ಅಭಿವೃದ್ಧಿಗೆ ವಿಶೇಷ ಅನುದಾನ ಮತ್ತು ಗಮನ ಹರಿಸುವ ಮೂಲಕ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರವು ಈ ನಿರಾಸೆಯನ್ನು ಸರಿದೂಗಿಸುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
"

ಕಳೆದ 20 ವರ್ಷಗಳಿಂದ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹಾಗಾಗಿ ಕೊಡಗಿಗೆ ಸಚಿವ ಸ್ಥಾನ ಬೇಕು ಎನ್ನುವುದು ಜಿಲ್ಲೆಯ ಕಾಂಗ್ರೆಸ್ ಮತ್ತು ಸಾರ್ವಜನಿಕರ ಬಯಕೆ ಆಗಿತ್ತು. ಇದಕ್ಕೆ ಪೂರಕವಾಗಿ ಕೊಡಗಿನಲ್ಲಿ ಇಬ್ಬರು ಉತ್ಸಾಹಿ ಶಾಸಕರೂ ಇದ್ದರು. ಆದರೆ ಪಕ್ಷ ಕೆಲವೊಂದು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ತೀರ್ಮಾನ ತೆಗೆದುಕೊಂಡಿದೆ. ಅದರಿಂದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಲೇಬೇಕು. ಸಚಿವ ಸ್ಥಾನಕ್ಕೆ ಬದಲಾಗಿ ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಾದರೂ ಜಿಲ್ಲೆಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇವೆ.

— ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

"

ಕೊಡಗಿನ ಇಬ್ಬರು ಯುವ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಮತ್ತು ಆಶಾಭಾವನೆ ಜಿಲ್ಲೆಯ ಜನರಲ್ಲಿತ್ತು. ವೈಯಕ್ತಿಕವಾಗಿ ಪೊನ್ನಣ್ಣ ಅವರಿಗೆ ನನ್ನ ಸಲಹೆ ಏನೆಂದರೆ ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನ ಗೌರವಯುತವಾಗಿ ಇನ್ನೊಬ್ಬರಿಗೆ ಹಸ್ತಾಂತರಿಸಿ. ಉಪಸಭಾಪತಿ ಅಧಿಕಾರ ವಹಿಸಿಕೊಂಡಲ್ಲಿ ಪಕ್ಷ ಸಂಘಟನೆಗೆ ಹೊಡೆತ ಬೀಳಲಿದ್ದು ನೀವುಗಳು ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಅವಕಾಶವಿರುವುದಿಲ್ಲ. ಆ ಸ್ಥಾನಕ್ಕೆ ಅದರದೇ ಆದ ಇತಿಮಿತಿ ಇದ್ದು, ನಿಮ್ಮನ್ನು ಬಿಟ್ಟು ಬೇರೆ ನಾಯಕತ್ವದಲ್ಲಿ ಸಂಘಟನೆ ಕಷ್ಟಸಾಧ್ಯ. ಇಬ್ಬರು ಶಾಸಕರು ಯುವಕರಾಗಿದ್ದು, ನಿಮಗಿಬ್ಬರಿಗೂ ಯೋಗ ಯೋಗ್ಯತೆ ಎರಡೂ ಇದೆ.

— ಹೆಚ್.ಎಸ್. ಚಂದ್ರಮೌಳಿ, ಕೆ.ಪಿ.ಸಿ.ಸಿ. ವಕ್ತಾರ

"

ಸ್ವಾತಂತ್ರಾö್ಯನAತರ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಕರ್ನಾಟಕದೊಂದಿಗೆ ವಿಲೀನವಾಗುವ ಸಂದರ್ಭದಲ್ಲಿ ವಿಶೇಷ ಸ್ಥಾನಮಾನ ಮತ್ತು ಅಧಿಕಾರದ ಭರವಸೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೊಡಲಾಗಿತ್ತು. ಆದರೆ ಇದುವರೆಗೂ ಸರ್ಕಾರಗಳು ಆ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕೊಡಗನ್ನು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬAತೆ ನಡೆಸಿಕೊಳ್ಳುತಿದ್ದು, ಇದು ಈ ಸರ್ಕಾರದಲ್ಲೂ ಮುಂದುವರೆದಿದೆ. ಮತ್ತೊಮ್ಮೆ ಕೊಡಗು ಪ್ರತ್ಯೇಕತೆಯ ಕೂಗು ಅನಿವಾರ್ಯ ಆಗಬಹುದು.

— ಚಾಮೆರ ದಿನೇಶ್ ಬೆಳ್ಯಪ್ಪ, ಅಧ್ಯಕ್ಷ, ಕೊಡವಾಮೆರ ಕೊಂಡಾಟ ಸಂಘಟನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net