ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ಕಲುಷಿತಗೊಂಡು ಹರಿಯುತ್ತಿರುವ ಜೀವನದಿ ಕಾವೇರಿಯ ಸಂರಕ್ಷಣೆ ಮಾಡುವ ಸಂಬAಧ ಮುಂದಿನ ಕೇಂದ್ರ ಬಜೆಟ್‌ನಲ್ಲಿ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುದಾನ ಕಲ್ಪಿಸಿ ಅನುಷ್ಠಾನಗೊಳಿಸುವಂತೆ ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಚೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಸಂಸದರಿಗೆ ನೀಡಿದ ನದಿ ಕಲುಷಿತ ಬಗ್ಗೆ ಸಮಗ್ರ ಮಾಹಿತಿಯನ್ನು ಆಧರಿಸಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ವಿವರವಾಗಿ ಪತ್ರ ಬರೆದಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಗ್ರಾಮಗಳು, ಪಟ್ಟಣದ ಕಲುಷಿತ ತ್ಯಾಜ್ಯ ನೇರವಾಗಿ ನದಿ ಒಡಲು ಸೇರಿ ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ. ನದಿ ತಟದ ಅಕ್ರಮ ಒತ್ತುವರಿ ವಾಣಿಜ್ಯ ಕಟ್ಟಡಗಳು ಪ್ರವಾಸಿಗರ ಮೂಲಕ ಉತ್ಪಾದನೆ ಆಗುವ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿದೆ. ಈ ಸಂಬAಧ ತಕ್ಷಣ ನದಿ ತಟದ ಸರ್ವೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಒತ್ತುವರಿ ತೆರವುಗೊಳಿಸುವ ಕ್ರಮ ಆಗಬೇಕಾಗಿದೆ. ನದಿ ತಟದಿಂದ ತೆರವು ಆಗುವ ನಿರಾಶ್ರಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಬೇಕು. ಕ್ರಮಬದ್ಧವಾಗಿ ನದಿ ತಟದ ಅಭಿವೃದ್ಧಿ ಆಗಬೇಕು.
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 9 ಗ್ರಾಮ, ಹಳ್ಳಿಗಳ ಮೂಲಕ ಕಾವೇರಿ ನದಿ ಹರಿಯುತ್ತಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು, ತಡೆಗೋಡೆ ನಿರ್ಮಾಣ, ನದಿ ತಟದ ಸಂರಕ್ಷಣೆ ಸೇರಿದಂತೆ ಒತ್ತುವರಿ ತೆರವುಗೊಳಿಸುವ ಕ್ರಮ ಆಗಬೇಕಾಗಿದೆ.
ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಆರು ಗ್ರಾಮಗಳು ಒಳಗೊಂಡಿದ್ದು ತ್ಯಾಜ್ಯಗಳು ನೇರವಾಗಿ ಹರಿಯದಂತೆ ಒಳಚರಂಡಿ ಯೋಜನೆ ನಿರ್ಮಾಣವಾಗಬೇಕು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ 9 ಗ್ರಾಮಗಳು ಒಂದು ಪುರಸಭೆ ನದಿ ತಟದಲ್ಲಿದ್ದು ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕು. ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಪರಿಸರ ಸ್ನೇಹಿ ಯೋಜನೆಗಳ ಮೂಲಕ ಸ್ವಚ್ಛ ಕಾವೇರಿ ವಾತಾವರಣ ನಿರ್ಮಾಣವಾಗಬೇಕಾಗಿದೆ.
ದಕ್ಷಿಣ ಭಾರತದ ಜೀವನಾಡಿ ಅಂತರರಾಜ್ಯ ಜನರ ಜೀವನದಿ ಆಗಿರುವ ಕಾವೇರಿಗೆ ಕೇಂದ್ರ ಸರ್ಕಾರ ಕ್ರಿಯಾ ಯೋಜನೆ ಮೂಲಕ ಅಗತ್ಯ ಅನುದಾನ ಮುಂದಿನ ಬಜೆಟ್ ನಲ್ಲಿ ಮೀಸಲಿರಿಸಬೇಕು. ನದಿ ಸಂರಕ್ಷಣೆಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಯೋಜನೆ ಅನುಷ್ಠಾನ ಗೊಳಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಮತ್ತೊಂದು ಕಡೆ ಈ ಬ್ಗಗೆ ಈಚೆಗೆ ಹೇಳಿಕೆ ನೀಡಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ನದಿ ತಟದ ಬಫರ್ ಝೋನ್ ಪ್ರದೇಶಗಳ ಒತ್ತುವರಿ ಬಗ್ಗೆ ಕಳೆದ ಆರು ತಿಂಗಳಿAದ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡಿದ್ದು, ಒತ್ತುವರಿ ಮಾಡಿರುವ ನದಿ ತಟಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸ್ವಚ್ಛ ಕಾವೇರಿ ಕನಸು ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪಿದ್ದು, ಇನ್ನೊಂದೆಡೆ ಸಮಿತಿಯ ಸಮಿತಿಯ ಹೋರಾಟ ಮತ್ತಿತರ ನಿರಂತರ ಚಟುವಟಿಕೆಗಳು ಗೂಗಲ್ ಪುಟ ಸೇರಿದ್ದು, ಕಾವೇರಿ ನದಿ ಸಂರಕ್ಷಣೆಯ ಕೂಗು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅಭಿಪ್ರಾಯಪಟ್ಟಿದ್ದಾರೆ.