ಕೃಷಿಕರಿಗೆ ಜಮ್ಮಾಬಾಣೆ ಕಾಯ್ದೆ ತಿದ್ದುಪಡಿ ಸಹಕಾರಿ

ಜಿಲ್ಲೆಯ ವಿವಿಧ ಸಂಘಟನೆಯ ಪ್ರಮುಖರು ಹಾಗೂ ಅಭಿಮಾನಿಗಳು ಶಾಸಕ ಡಾ.ಮಂತರ್‌ಗೌಡ ಅವರನ್ನು ಅಭಿನಂದಿಸಿದರು.
ಜಿಲ್ಲೆಯ ವಿವಿಧ ಸಂಘಟನೆಯ ಪ್ರಮುಖರು ಹಾಗೂ ಅಭಿಮಾನಿಗಳು ಶಾಸಕ ಡಾ.ಮಂತರ್‌ಗೌಡ ಅವರನ್ನು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಕರಿಗೆ ಜಮ್ಮಾಬಾಣೆ ಕಾಯ್ದೆ ತಿದ್ದುಪಡಿ ಸಹಕಾರಿ
  • ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ
ಮಡಿಕೇರಿ: ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಕ್ಕೆ ಜಾರಿಗೊಳಿಸುವಲ್ಲಿ ಶ್ರಮಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರನ್ನು ಶುಕ್ರವಾರ ಅಭಿನಂದಿಸಲಾಯಿತು.
ನಗರದ ಲಯನ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಮಂತರ್ ಗೌಡ ಅವರಿಗೆ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮಂತರ್ ಗೌಡ, ಕೊಡಗು ಜಿಲ್ಲೆಯ ಕೃಷಿಕರಲ್ಲಿ ನೂರಾರು ವರ್ಷಗಳಲ್ಲಿ ಕಾಡಿದ್ದ ಜಮ್ಮಾ ಬಾಣೆ ಸಮಸ್ಯೆಯನ್ನು ಒಂದು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸಲಾಗಿದೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ನಿರಂತರ ಪ್ರಯತ್ನ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಈ ಸಂಬಂಧ ಹಲವು ಬಾರಿ ಸಭೆ ನಡೆಸಿ ಸದನಕ್ಕೆ ಮಂಡಿಸುವ ಮೂಲಕ ಜಮ್ಮಾ ಬಾಣೆ ಸಮಸ್ಯೆಯನ್ನು ಕಾಯ್ದೆರೂಪಕ್ಕೆ ಜಾರಿಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದು ವಿವರಿಸಿದರು.
ಕೊಡಗು ಜಿಲ್ಲೆಯ ಕೃಷಿಕರ ಅನುಕೂಲಕ್ಕಾಗಿ ಜಮ್ಮಾ ಬಾಣೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶ್ರಮಿಸಲಾಗಿದೆ. ಕೃಷಿಕರು ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಲು, ಬೆಳೆ ವಿಮೆ, ಬೆಳೆ ಹಾನಿ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಆಯಾಯ ತೋಟದ ಮಾಲೀಕರಿಗೆ ಆರ್‌ಟಿಸಿ ಮಾಡಿಕೊಡಲು ಈ ಕಾಯ್ದೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇದೆ. ಆದರೆ, ಅವರ ಕುಟುಂಬದವರು ತೋಟವನ್ನು ಅನುಭವಿಸಿಕೊಂಡು ಬರುತ್ತಾರೆ. ಆದರೆ, ಆರ್‌ಟಿಸಿ ಇಲ್ಲದೆ ಸೌಲಭ್ಯ ಪಡೆಯುವುದು ಕಷ್ಟವಾಗಿದೆ. ಜಮ್ಮಾಬಾಣೆ ಕಾಯ್ದೆ ತಿದ್ದುಪಡಿಯಿಂದ ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಸ್ವತಂತ್ರ ಭೂಮಿ ಹಕ್ಕು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಒಳಿತು ಕೆಡುಕು ಇರುತ್ತದೆ. ಆದರೆ ಭೂಮಿ ಮಾರಿಕೊಳ್ಳದೆ ಭೂಮಿಯನ್ನು ಉಳಿಸಿಕೊಳ್ಳಬೇಕು. ಪ್ರತಿ ಕ್ಷೇತ್ರದಲ್ಲೂ ಕೆಲವು ಲೋಪದೋಷಗಳು ಇದ್ದು, ಅದನ್ನು ಸರಿಪಡಿಸಲು ಮುಂದಾಗಲಾಗಿದೆ. ಇದರಿಂದ ಸಣ್ಣ ಕೃಷಿಕರಿಗೆ ಅನುಕೂಲವಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಜಮ್ಮಾ ಭೂಮಿಗೆ ಸಂಬಂಧಿಸಿದಂತೆ ಎಷ್ಟೋ ವರ್ಷಗಳಿಂದ ಸರ್ವೇ ಕಾರ್ಯ ಆಗಿಲ್ಲ. ಆದ್ದರಿಂದ ಮರು ಸರ್ವೆ ಮಾಡಿ ಗಡಿಯನ್ನು ಗುರುತಿಸುವುದು ಅತ್ಯಗತ್ಯ ಎಂದು ಡಾ.ಮಂತರ್‌ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜೊತೆಗೆ ಸಿ ಮತ್ತು ಡಿ ಭೂಮಿಯ ಸಮಸ್ಯೆಯನ್ನು ಸಹ ಪರಿಹರಿಸಲು ಪ್ರಯತ್ನಿಸಲಾಗುವುದು. ರೈತರ ಪರವಾಗಿ ಸದಾ ಕೆಲಸ ಮಾಡಲು ಸಿದ್ದವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಹೀಗೆ ಎಲ್ಲರ ಸಹಕಾರದಿಂದ ನಾವು ರೈತರ ಜೊತೆಗಿದ್ದೇವೆ ಎಂದ ಅವರು, ಶಾಸಕಾಂಗದ ಮೂಲಕ ಕಾಯ್ದೆ, ಕಾನೂನನ್ನು ಜಾರಿಗೊಳಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪಾಲಿಸುವುದು ಅತೀ ಮುಖ್ಯ ಎಂದರು.
ಪ್ರಮುಖರಾದ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಮ್ಮಾ ಹಿಡುವಳಿದಾರರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗುವಲ್ಲಿ ಜಿಲ್ಲೆಯ ಶಾಸಕರು ದೊಡ್ಡ ಕಾಣಿಕೆ ನೀಡಿದ್ದು, ಹೊಸ ಚೈತನ್ಯ ತುಂಬಿದ್ದಾರೆ ಎಂದು ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್, ವಕೀಲರಾದ ಎಂ.ಎ.ನಿರಂಜನ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಮುಖರಾದ ತೆನ್ನಿರಾ ಮೈನಾ, ಚುಮ್ಮಿ ದೇವಯ್ಯ, ಕೂರ್ಗ್ ಪ್ಲಾಂಟೇಶನ್ ಅಸೋಷಿಯೇಷನ್ ಪ್ರಮುಖರಾದ ನಂದ ಬೆಳ್ಯಪ್ಪ, ಪ್ರಮುಖರಾದ ಜಿ.ಚಿದ್ವಿಲಾಸ್, ಪ್ರಕಾಶ್ ಆಚಾರ್ಯ, ಹಂಸ, ಕೆ.ಎ.ದೇವಯ್ಯ, ಅಂಬೆಕಲ್ಲು ನವೀನ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಭಿಮಾನಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net