ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉ.ರಾ.ನಾಗೇಶ್, ಎಸ್.ಜೆ.ದೇವದಾಸ್, ಬಿ.ಬಿ.ನಾಗರಾಜು, ಕುಮಾರ ಇತರರಿದ್ದರು.
ಮಡಿಕೇರಿ: ಅಮರಶಿಲ್ಪಿ ಜಕಣಾಚಾರಿ ಅವರು ನಾಡುಕಂಡ ಅದ್ಭುತ ಶಿಲ್ಪಿ ಎಂದು ಸಾಹಿತಿ ಉ.ರಾ.ನಾಗೇಶ್ ವರ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ಅವರು ಹೊಯ್ಸಳ ಶೈಲಿಯ ಕಲ್ಯಾಣ ಚಾಲುಕ್ಯರ ದೇವಾಲಯಗಳಾದ ಬೇಲೂರು ಮತ್ತು ಹಳೇಬೀಡುವಿನಂತಹ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಜಕಣಾಚಾರಿ ಅವರು ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನಿಸಿ ಸುಮಾರು ೮೦ ವರ್ಷಗಳ ಕಾಲ ಬದುಕಿ ೧೫೦ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿ ಅಮರಶಿಲ್ಪಿ ಬಿರುದು ಹೊಂದಿದ್ದಾರೆ ಎಂದು ಉ.ರಾ.ನಾಗೇಶ್ ತಿಳಿಸಿದರು.
ಬಾಲ್ಯದಿಂದಲೇ ಶಿಲ್ಪಕಲೆಗೆ ತನ್ನನ್ನು ಅರ್ಪಿಸಿಕೊಂಡು ದೇಶದಾದ್ಯಂತ ಸಂಚರಿಸಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಜನಪದ ಸಂಸ್ಕೃತಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದ್ದು, ರಾಜ್ಯ ಸರ್ಕಾರವು ಮಾಸ್ಟರ್ ಶಿಲ್ಪಿಗಳಿಗಾಗಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ವಿವರಿಸಿದರು.
ಜಕಣಾಚಾರಿ ಅವರು ಒಬ್ಬ ವಿಶೇಷ ಎಂಜಿನಿಯರ್ ಎಂದರೆ ಅತಿಶಯೋಕ್ತಿಯಲ್ಲ. ತತ್ವಜ್ಞಾನದ ಜೊತೆಗೆ ತಪಸ್ಸು ಮಾಡಿ ಶಿಲ್ಪ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಿದ್ದಾರೆ. ಜಕಣಾಚಾರಿ ಅವರ ದೂರದೃಷ್ಟಿ ಮೆಚ್ಚುವಂತದ್ದು ಎಂದು ಉ.ರಾ.ನಾಗೇಶ್ ಹೇಳಿದರು.
ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್.ಜೆ.ದೇವದಾಸ್ ಮಾತನಾಡಿ, ನಾಡಿನ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಶಿಲ್ಪಕಲೆಗಳನ್ನು ನೀಡಿದ್ದು, ಇವರ ಏಕಾಗ್ರತೆ, ಸಾಧನೆ ಸದಾ ಸ್ಮರಣೀಯ ಎಂದರು.
ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾಗರಾಜು ಮಾತನಾಡಿ, ಬೇಲೂರು, ಹಳೇಬೀಡು ಸೇರಿದಂತೆ ಹಲವು ಶಿಲ್ಪಗಳನ್ನು ಕಣ್ಣು ಬಿಟ್ಟು ನೋಡಬೇಕು. ಕಿವಿ ತೆರೆದಿಟ್ಟು ಕೇಳಬೇಕು ಅಂತಹ ಅದ್ಭುತ ಕೆತ್ತನೆ ಮಾಡಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಪ್ರಕಾಶ್ ಆಚಾರ್ಯ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರ ಪರಿಕಲ್ಪನೆ ಮತ್ತು ದೂರದೃಷ್ಟಿ ಮತ್ತು ತಾಳ್ಮೆ ಮೆಚ್ಚುವಂತದ್ದು, ಅವರು ಕೆತ್ತನೆ ಮಾಡಿರುವ ಶಿಲ್ಪಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ ಎಂದರು.
ಪ್ರಮುಖರಾದ ಬಾಬು ಆಚಾರ್ಯ, ವಿದ್ಯಾಲತಾ ವೆಂಕಟರಮಣ, ಅಶೋಕ್, ದಾಮೋದರ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರೆ, ಭವ್ಯ ನಿರೂಪಿಸಿ, ವಂದಿಸಿದರು.