ಆರೋಪ-ಪ್ರತ್ಯಾರೋಪ, ಪ್ರತಿಪಕ್ಷ ಸದಸ್ಯರ ಬಹಿಷ್ಕಾರ

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಪ್ರಮೋದ್ ಗಣಪತಿ, ಮಂಜುಳಾ, ತಿಮ್ಮಯ್ಯ ಇತರರಿದ್ದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಪ್ರಮೋದ್ ಗಣಪತಿ, ಮಂಜುಳಾ, ತಿಮ್ಮಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಪ-ಪ್ರತ್ಯಾರೋಪ, ಪ್ರತಿಪಕ್ಷ ಸದಸ್ಯರ ಬಹಿಷ್ಕಾರ
ಗೋಣಿಕೊಪ್ಪ: ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆ ಆರೋಪ-ಪ್ರತ್ಯಾರೋಪ ಹಾಗೂ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆ ನಡೆಯಿತು.
ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ, ಕಸದ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳು ಬಿಗಡಾಯಿಸುತಿರುವುದನ್ನು ಖಂಡಿಸಿ ಮತ್ತು ಸದಸ್ಯರುಗಳನ್ನು ಬಸ್ಸ್ ನಿಲ್ದಾಣ ಉದ್ಘಾಟನೆಗೆ ಅಹ್ವಾನಿಸದೆ ಅಗೌರವಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಬೆಂಬಲಿತ ಸದಸ್ಯರು ಸಭೆಯಿಂದ ಎದ್ದು ನಿಂತು ಬಹಿಷ್ಕಾರ ಘೋಷಿಸಿದರು.
ಗ್ರಾಪಂ ಸದಸ್ಯ ರಾಮಕೃಷ್ಣ ಮಾತನಾಡಿ, ಬಸ್ ನಿಲ್ದಾಣ ಉದ್ಘಾಟನೆ ವೇಳೆ ಸದಸ್ಯರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಯಾವುದೇ ಮಾಹಿತಿ ನೀಡದೇ ತರಾತುರಿಯಲ್ಲಿ ಉದ್ಘಾಟನೆ ನಡೆಸಲಾಗಿದೆ. ಉದ್ಘಾಟನೆಯಾದರೂ ಪ್ರಯಾಣಿಕರಿಗೆ ಕುಡಿಯುವ ನೀರು, ಆಸನ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ. ಕಳೆದ ೩೦ ತಿಂಗಳಲ್ಲಿ ಅಧ್ಯಕ್ಷರು ಸ್ಥಳೀಯ ಅಭಿವೃದ್ಧಿಯತ್ತ ಗಮನ ಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮತ್ತೋರ್ವ ಸದಸ್ಯ ಕೆ.ರಾಜೇಶ್ ಮಾತನಾಡಿ, ಕಳೆದ ಎರಡುವರೆ ವರ್ಷಗಳಲ್ಲಿ ತಿಂಗಳಿಗೊಂದು ಸಭೆಯಂತೆ ಸುಮಾರು ೩೦ ಸಭೆಗಳು ನಡೆಯಬೇಕಾಗಿದ್ದರೂ ಕೇವಲ ೧೨ ಸಭೆಗಳಷ್ಟೇ ನಡೆದಿವೆ. ಇದು ಜನಪರ ಆಡಳಿತದ ಲಕ್ಷಣವಲ್ಲ ಎಂದು ಟೀಕಿಸಿದರು. ಈ ವೇಳೆ ಸದಸ್ಯರಾದ ಗೀತಾ, ವಿವೇಕ್ ರಾಯ್ಕರ್, ಸೌಮ್ಯ ಬಾಲು ಹಾಗೂ ಹಕೀಮ್ ಸಭೆಯಿಂದ ಹೊರನಡೆದರು.
ಕೊಣಿಯಂಡ ಬೋಜಮ್ಮ, ರತಿ ಅಚ್ಚಪ್ಪ, ಚೈತ್ರ ಬಿ.ಚೇತನ್, ಪುಷ್ಪ ಮನೋಜ್ ಸಭೆಯಿಂದ ಹೊರಹೋಗಲು ತಡಬಡಿಸಿದರು. ಕೆಲ ಕ್ಷಣದ ನಂತರ ಹೊರ ನಡೆದರು.
ಮತ್ತೋರ್ವ ಸದಸ್ಯ ಬಿ.ಎನ್.ಪ್ರಕಾಶ್, ಸಭೆಯಲ್ಲಿ ಉಳಿದುಕೊಂಡು ಆಡಳಿತ ಪಕ್ಷದವರ ಬಗ್ಗೆ ಒಲವು ತೋರಿದರು. ತಡವಾಗಿ ಬಂದ ಆಡಳಿತ ಪಕ್ಷದ ಸದಸ್ಯ ಶರತ್‌ಕಾಂತ್ ಮತ್ತು ಧ್ಯಾನ್ ಸುಬ್ಬಯ್ಯ ಅವರ ಸಹಿಯಿಂದ ಸಭೆಗೆ ಕೋರಂ ದೊರೆಯಿತು. ಅಧ್ಯಕ್ಷರು ಇನ್ನು ಐದು ದಿನದಲ್ಲಿ ಗ್ರಾಪಂ ಆಡಳಿತ ಕೊನೆಗೊಳ್ಳಲಿರುವ ಆಡಳಿತದ ಕೊನೆಯ ಸಭೆಯನ್ನು ಮುಂದುವರಿಸಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಅನುವಾದನೆಗಳಿಗೆ ಸಹಿ ಹಾಕಿದರು.
ಆರೋಪ ತಳ್ಳಿಹಾಕಿದ ಅಧ್ಯಕ್ಷರು: ಸಭೆಯ ಬಳಿಕ ಮಾತನಾಡಿದ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಬಸ್ ನಿಲ್ದಾಣ ಉದ್ಘಾಟನೆಗೆ ಯಾವುದೇ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿಲ್ಲ. ಶಾಸಕರ ಹುಟ್ಟು ಹಬ್ಬಕ್ಕೆ ಆ ದಿನ ಮೀಸಲಾಗಬೇಕು ಎಂಬ ಮಹತ್ವಕಾಂಕ್ಷಿ ಚಿಂತನೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿದ ಸಂಸ್ಥೆ ಇನ್ನೂ ಪಂಚಾಯಿತಿಗೆ ಅಧಿಕೃತವಾಗಿ ಹಸ್ತಾಂತರಿಸದ ಕಾರಣ ಶೌಚಾಲಯ ತೆರೆಯಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಳಿತುಕೊಳ್ಳುವ ಆಸನಗಳ ವಿನ್ಯಾಸದಲ್ಲಿ ಬದಲಾವಣೆ ಸೂಚಿಸಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಉದ್ದವಾದ ಬೆಂಚುಗಳ ಬದಲು ಒಬ್ಬರಿಗೆ ಕುಳಿತುಕೊಳ್ಳಲು ಅನುಕೂಲವಾಗುವ ಆಸನಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ, ಪಿಡಿಒ ತಿಮ್ಮಯ್ಯ ಹಾಗೂ ಇತರ ೯ ಸದಸ್ಯರುಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net