ಮಡಿಕೇರಿ ಕರ್ಣಂಗೇರಿಯಲ್ಲಿರುವ ಅಂಗನವಾಡಿ ಕೇಂದ್ರ ಮೂಲಕ ಬಾಣಂತಿಯರಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ವಿಜಯವಾಣಿ ಜತೆ ದೂರಿಕೊಂಡಿರುವ ಫಲಾನುಭವಿಗಳು ಬುಧವಾರ ಈ ತಿಂಗಳ ಮೊಟ್ಟೆಗಳನ್ನು ಪಡೆದುಕೊಂಡಿದ್ದು, ಬಹುತೇಕ ಮೊಟ್ಟೆಗಳು ಹಾಳಾಗಿವೆ ಎಂದಿದ್ದಾರೆ. ಈ ತಿಂಗಳು ಕೊಟ್ಟಿರುವ 30 ಮೊಟ್ಟೆಗಳ ಪೈಕಿ 13 ಮೊಟ್ಟೆಗಳನ್ನು ಒಡೆದು ನೋಡಿದಾಗ ಒಳಗಡೆ ಕಪ್ಪಾಗಿತ್ತು. ಮೊಟ್ಟೆಯ ಮೇಲ್ಭಾಗವೂ ಫಂಗಸ್ ಬಂದAತೆ ಕಪ್ಪಾಗಿದ್ದು, ಹಳೆಯ ಮೊಟ್ಟೆಗಳನ್ನು ಕೊಟ್ಟಿರುವ ಅನುಮಾನವಿದೆ. ಒಂದು ವೇಳೆ ಅರಿಯದೇ ಈ ಕೊಳೆತ ಮೊಟ್ಟೆಗಳನ್ನು ಸೇವಿಸಿದ್ದರೆ ತಾಯಿ ಮತ್ತು ಮಗುವಿನ ಆರೋಗ್ಯದ ಸ್ಥಿತಿ ಏನಾಗುತ್ತಿತ್ತು ಎಂದು ಫಲಾನುಭವಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಂದರ್ಭ ಎಚ್ಚರಿಕೆ ವಹಿಸಬೇಕು. ಆರೋಗ್ಯದ ಜತೆ ಆಟವಾಡುವುದು ಸರಿಯಲ್ಲ ಎಂದಿದ್ದಾರೆ.