ಕುಶಾಲನಗರದಲ್ಲಿ ಅಕ್ರಮ ಮತಾಂತರ ಆರೋಪ

ಕುಶಾಲನಗರದ ಖಾಸಗಿ ಸಭಾಂಗಣವೊAದರಲ್ಲಿ ಪ್ರಾರ್ಥನೆ ನೆಪದಲ್ಲಿ ಅಕ್ರಮ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.
ಕುಶಾಲನಗರದ ಖಾಸಗಿ ಸಭಾಂಗಣವೊAದರಲ್ಲಿ ಪ್ರಾರ್ಥನೆ ನೆಪದಲ್ಲಿ ಅಕ್ರಮ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.
Published on
ಕುಶಾಲನಗರ:
ಸುಂಟಿಕೊಪ್ಪ ಸಮೀಪದ ಹೇರೂರು ಗಿರಿಜನ ಹಾಡಿಯಲ್ಲಿ ಅಕ್ರಮ ಮತಾಂತರದ ಆರೋಪದಲ್ಲಿ ನಡೆದ ಪ್ರತಿಭಟನೆಯ ನೆನಪು ಹಸಿರಾಗಿರುವಾಗಲೇ ಕುಶಾಲನಗರದಲ್ಲೂ ಭಾನುವಾರ ಇಂಥದ್ದೇ ಘಟನೆ ನಡೆದಿದೆ. ಪ್ರಾರ್ಥನೆ ಹೆಸರಿನಲ್ಲಿ ಹಿಂದೂಗಳನ್ನು ಅನಧಿಕೃತವಾಗಿ ಸೇರಿಸಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಕೋಣ ಮಾರಿಯಮ್ಮ ದೇವಾಲಯದ ಬಳಿಯ ಖಾಸಗಿ ಸಭಾಂಗಣದಲ್ಲಿ ಸುಮಾರು 100-120 ಮಂದಿ ಸೇರಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಮೂಲಕ ಅಕ್ರಮ ಮತಾಂತರಕ್ಕೆ ಪ್ರೇರೇಪಣೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಬಗ್ಗೆ ತನಿಖೆ ನಡೆಸಬೇಕು. ಅಕ್ರಮ ಮತಾಂತರ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನೆಯ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಕಳೆದ ಕೆಲವು ವರ್ಷಗಳಿಂದ ಪ್ರತಿ ಭಾನುವಾರ ಇಲ್ಲಿ ಪ್ರಾರ್ಥನೆ ನೆಪದಲ್ಲಿ ಹಿಂದೂಗಳನ್ನು ಸೇರಿಸಿ ಮತಾಂತರಕ್ಕೆ ಪ್ರೇರೇಪಿಸುವ ಕೆಲಸ ನಡೆಯುತ್ತಿದೆ. ಇಲ್ಲಿಗೆ ಸ್ಥಳೀಯರಿಗಿಂತ ಹೆಚ್ಚಾಗಿ ಪಕ್ಕದ ಜಿಲ್ಲೆಗಳಿಂದ ಜನರು ಬರುತ್ತಿದ್ದಾರೆ. ಈ ಭಾನುವಾರವೂ ಪಕ್ಕದ ಜಿಲ್ಲೆಗಳ ಸಾಕಷ್ಟು ಜನರು ಸೇರಿದ್ದರು ಎಂದು ಹಿಂದೂ ಹಿಂದೂ ಜಾಗರಣ ವೇದಿಕೆ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜು ಈ ಸಂದರ್ಭ ಹೇಳಿದರು.
ಅಕ್ರಮ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಡೆಯಿಂದ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಸ್ತವಾಂಶ ಪರಿಶೀಲಿಸಿ ಮುಂದಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಿಂದೂ ಸಂಘಟನೆಗಳ ಮುಖಂಡರಾದ ಸುಮನ್, ಭರತ್ ಮಾಚಯ್ಯ, ಹರೀಶ್, ರಾಜೀವ್, ಪ್ರಜ್ವಲ್, ಎಂ.ಡಿ. ಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net