ಕೃಷಿ ಭೂಮಿ ಕನ್ವರ್ಷನ್ ಪರಿಸರ ನಾಶಕ್ಕೆ ಪರ್ಮಿಷನ್

ಮಡಿಕೇರಿ ಸಮೀಪದ ಭೂ ಪರಿವರ್ತನೆ ಆಗಿರುವ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ.
ಮಡಿಕೇರಿ ಸಮೀಪದ ಭೂ ಪರಿವರ್ತನೆ ಆಗಿರುವ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ.
Published on
ಮಡಿಕೇರಿ:
ಪಶ್ಚಿಮಘಟ್ಟದ ಮಡಿಲಲ್ಲಿ ಇರುವ ಕೊಡಗಿನಲ್ಲಿ ಕೃಷಿ ಜಮೀನುಗಳ ಪರಿವರ್ತನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಪ್ರಜ್ಞಾವಂತರ ಆತಂಕಕಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರದ ನಿಯಮಗಳಲ್ಲಿ ಕೂಡ ಸಡಿಲಿಕೆ ತಂದಿರುವುದು ಪರಿಸರ ನಾಶಕ್ಕೆ ನೇರ ರಹದಾರಿ ಕೊಟ್ಟಂತೆ ಆಗಿದೆ. ಜಿಲ್ಲೆಯ ಸೂಕ್ಷ್ಮ ಪರಿಸರ ವಲಯದಲ್ಲಿ ಹೆಚ್ಚುತ್ತಿರುವ ರೆಸಾರ್ಟ್, ಹೋಂಸ್ಟೇ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಭೂ ಕುಸಿತ, ಜಲಮೂಲಗಳ ನಾಶ ಹಾಗೂ ಪ್ರಕೃತಿ ವಿಕೋಪಗಳಿಗೆ ದಾರಿ ಮಾಡಿಕೊಡುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ.
ಪಶ್ಚಿಮ ಘಟ್ಟಗಳನ್ನು ದಕ್ಷಿಣ ಭಾರತದ ನೀರಿನ ತೊಟ್ಟಿ ಎಂದೇ ಕರೆಯಲಾಗುತ್ತದೆ. ಕೊಡಗಿನಲ್ಲಿ ನಡೆಯುತ್ತಿರುವ ನಿಯಂತ್ರಣವಿಲ್ಲದ ಭೂ ಪರಿವರ್ತನೆಯಿಂದಾಗಿ ಜೀವನದಿ ಕಾವೇರಿ ಸೇರಿದಂತೆ ಈ ಭಾಗದಲ್ಲಿ ಹುಟ್ಟುವ ಪ್ರಮುಖ ನದಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮಳೆ ಚಕ್ರದ ಮೇಲೂ ಇದರ ದುಷ್ಪರಿಣಾಮ ಕಂಡು ಬರುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ಆಗುತ್ತಿರುವ ಬದಲಾವಣೆಗಳು ಚಿಂತನೆಗೆ ಕಾರಣವಾಗಿದೆ. ಅತ್ಯಂತ ಸೂಕ್ಷö್ಮವಾದ ಪರಿಸರ ವಲಯವಾದ ಪಶ್ಚಿಮ ಘಟ್ಟವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲೆಯೂ ಇದ್ದು, ನಿರಂತರ ಭೂ ಪರಿವರ್ತನೆಗಳು ಪಶ್ಚಿಮಘಟ್ಟದ ಅಸ್ತಿತ್ವಕ್ಕೇ ಸವಾಲು ಹಾಕವಂತಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಪರಿವರ್ತನೆ ಬಗ್ಗೆ ಈಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರ ಪ್ರಶ್ನೆಯೊಂದಕ್ಕೆ ಸರ್ಕಾರ ಕೊಟ್ಟಿರುವ ಉತ್ತರ ಆತಂಕ ಹುಟ್ಟಿಸುವಂತಿದೆ. ಭೂ ಪರಿವರ್ತನೆಗಾಗಿ ಸಲ್ಲಿಕೆ ಆಗುತ್ತಿರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದ್ದು, ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 7,647 ಅರ್ಜಿಗಳು ಭೂ ಪರಿವರ್ತನೆಗಾಗಿ ಸರ್ಕಾರದ ಮುಂದೆ ಬಂದಿದ್ದು, ಈ ಪೈಕಿ 4,250 ಅರ್ಜಿಗಳನ್ನು ಪುರಸ್ಕರಿಸಲಾಗಿದೆ.
ಭೂ ಪರಿವರ್ತನೆಗಾಗಿ 2023-24ರಲ್ಲಿ ಮಡಿಕೇರಿ ತಾಲೂಕಿನಲ್ಲಿ 272 ಅರ್ಜಿಗಳು ಸಲ್ಲಿಕೆಯಾಗಿದ್ದು, 186 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. 2024-25ರಲ್ಲಿ 463 ಅರ್ಜಿಗಳು ಸಲ್ಲಿಕೆಯಾಗಿದ್ದು, 250 ಅರ್ಜಿಗಳಲ್ಲಿ ಪುರಸ್ಕರಿಸಲಾಗಿದೆ. 2025-26ರಲ್ಲಿ 764 ಅರ್ಜಿಗಳು ಸಲ್ಲಿಕೆಯಾಗಿದ್ದು, 463 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. 2023-24ರಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಸಲ್ಲಿಕೆಯಾಗಿದ್ದ 322 ಅರ್ಜಿಗಳ ಪೈಕಿ 189 ಅರ್ಜಿಗಳನ್ನು ಅನುಮೋದಿಸಲಾಗಿದೆ. 2024-25ರಲ್ಲಿ 595 ಅರ್ಜಿಗಳನ್ನು ಸಲ್ಲಿಸಲಾಗಿದ್ದು, 310 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. 2025-26ರಲ್ಲಿ ಸಲ್ಲಿಕೆಯಾಗಿದ್ದ 908 ಅರ್ಜಿಗಳ ಪೈಕಿ 494 ಅರ್ಜಿಗಳನ್ನು ಅನುಮೋದಿಸಲಾಗಿದೆ.
ಕುಶಾಲನಗರ ತಾಲೂಕಿನಲ್ಲಿ 2023-24ರಲ್ಲಿ 339 ಅರ್ಜಿಗಳನ್ನು ಸಲ್ಲಿಸಲಾಗಿದ್ದು, 196 ಅರ್ಜಿಗಳು ಅನುಮೋದನೆಗೊಂಡಿವೆ. 2024-25ರಲ್ಲಿ ಸಲ್ಲಿಕೆಯಾದ 458 ಅರ್ಜಿಗಳ ಪೈಕಿ 235 ಅರ್ಜಿಗಳು ಪುರಸ್ಕೃತವಾಗಿದ್ದು, 2025-26ರಲ್ಲಿ ಸಲ್ಲಿಕೆಯಾಗಿದ್ದ 666 ಅರ್ಜಿಗಳ ಪೈಕಿ 392 ಅರ್ಜಿಗಳನ್ನು ಅನುಮೋದಿಸಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 2023-24ರಲ್ಲಿ 187 ಅರ್ಜಿಗಳು ಸಲ್ಲಿಕೆಯಾಗಿದ್ದು 80 ಅರ್ಜಿಗಳು ಅನುಮೋದನೆಗೊಂಡಿವೆ. 2024-25ರಲ್ಲಿ ಸಲ್ಲಿಕೆಯಾಗಿದ್ದ 310 ಅರ್ಜಿಗಳಲ್ಲಿ 132 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. 2025-26ರಲ್ಲಿ 497 ಅರ್ಜಿಗಳು ಸಲ್ಲಿಕೆಯಾಗಿದ್ದು 245 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. 2023-24ರಲ್ಲಿ ಪೊನ್ನಂಪೇಟೆ ತಾಲೂಕಿನಲ್ಲಿ ಸಲ್ಲಿಕೆಯಾಗಿದ್ದ 352 ಅರ್ಜಿಗಳಲ್ಲಿ 228 ಅರ್ಜಿಗಳು ಅನುಮೋದನೆ ಪಡೆದುಕೊಂಡಿದ್ದವು. 2024-25ರಲ್ಲಿ 545 ಅರ್ಜಿಗಳನ್ನು ಸಲ್ಲಿಸಲಾಗಿದ್ದು, 280 ಅರ್ಜಿಗಳು ಪುರಸ್ಕೃತವಾಗಿದ್ದವು. 2025-26ರಲ್ಲಿ 960 ಅರ್ಜಿಗಳು ಬಂದಿದ್ದು 561 ಅರ್ಜಿಗಳಿಗೆ ಅನುಮೋದನೆ ಕೊಡಲಾಗಿದೆ.
ತಾಲೂಕುವಾರು ಅಂಕಿ-ಅAಶಗಳನ್ನು ಗಮನಿಸಿದರೆ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ನಡೆಯುತ್ತಿರುವುದು ಕಂಡುಬರುತ್ತಿದೆ. ಕಳೆದ ಮೂರು ವರ್ಷಗಳಲ್ಲೇ ಸಾವಿರಾರು ಎಕರೆ ಕೃಷಿ ಭೂಮಿ ಕಾಂಕ್ರೀಟ್ ಕಾಡುಗಳಾಗಿ ಬದಲಾಗಿದೆ. ಇದರಿಂದಾಗಿ ಕೊಡಗಿನಲ್ಲಿ ತಕ್ಷಣದ ಮತ್ತು ದೂರಗಾಮಿ ಪರಿಣಾಮಗಳು ಕಂಡು ಬರುತ್ತಿರುವ ಬಗ್ಗೆ ಪರಿಸರಾಸಕ್ತರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರವು ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿರುವುದು ಮತ್ತು ಆನ್‌ಲೈನ್ ಮೂಲಕ ಶೀಘ್ರ ವಿಲೇವಾರಿಗೆ ಹಲವು ಕಾಯ್ದೆ ತಿದ್ದುಪಡಿಗಳನ್ನು ತಂದಿರುವುದು ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂ ಪರಿವರ್ತನೆಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾ ಯೋಜನೆ ಪ್ರದೇಶದ ಒಳಗೆ ಇರುವ ಜಮೀನಿನ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿರುವುದಿಲ್ಲ. ನಮೂನೆ-21ಬಿ ಅಫಿಡವಿಟ್ ಮತ್ತು 11ಇ ನಕ್ಷೆಯೊಂದಿಗೆ ಆನ್‌ಲೈನ್ ಅರ್ಜಿಗೆ ಡಿಜಿಟಲ್ ಪಾವತಿ ಮಾಡಿದ ತಕ್ಷಣ ಸ್ವಯಂಚಾಲಿತ ಅನುಮೋದನೆ ಸಿಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ತಹಸೀಲ್ದಾರ್, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಉಪವಿಭಾಗಾಧಿಕಾರಿಗಳಿಂದ ವರದಿ ಪಡೆದು, ಒಟ್ಟು 30 ದಿನಗಳ ಕಾಲಮಿತಿಯೊಳಗೆ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ತಗಾದೆ ನೋಟಿಸ್ ಜಾರಿಯಾಗಿ ಶುಲ್ಕ ಪಾವತಿಸಿದ ತಕ್ಷಣ ಡಿಜಿಟಲ್ ಸಹಿಯುಕ್ತ ಸ್ವಯಂಚಾಲಿತ ಭೂ ಪರಿವರ್ತನಾ ಆದೇಶ ಸೃಜನೆಯಾಗುತ್ತದೆ. ಬಗರ್ ಹುಕುಂ, ಸಕ್ರಮ ಅಥವಾ ಇತರ ಮಂಜೂರಾತಿ ನಿಯಮಗಳಡಿ ಖಾತೆ, ಪೋಡಿ ದುರಸ್ತಿಯಾಗಿ, ಸರ್ಕಾರದ ಪರಭಾರ ನಿರ್ಬಂಧ ಅವಧಿ ಮುಗಿದ ಜಮೀನುಗಳಿಗೆ ಮಾತ್ರ ಭೂ ಪರಿವರ್ತನೆಗೆ ಅವಕಾಶವಿದೆ. 2 ಎಕರೆವರೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಭೂ ಪರಿವರ್ತನೆ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.
ಸರ್ಕಾರವು ಆಡಳಿತಾತ್ಮಕವಾಗಿ 30 ದಿನಗಳಲ್ಲಿ ಅರ್ಜಿ ವಿಲೇವಾರಿಗೆ ಸ್ವಯಂಚಾಲಿತ ಪರಿವರ್ತನೆ ನಿಯಮ ತಂದಿರುವುದು ನಿಯಮಾವಳಿಗಳನ್ನು ಪಾಲಿಸಲು ಅನುಕೂಲಕರವಾಗಿದ್ದರೂ, ಕೊಡಗಿನಂತಹ ಪರಿಸರ ಸೂಕ್ಷ್ಮ ವಲಯದಲ್ಲಿ ಇದು ಮಾರಕವಾಗುತ್ತಿದೆ ಎಂಬುದು ಪರಿಸರಾಸಕ್ತರ ಆರೋಪ. ಖಾಸಗಿ ವ್ಯಕ್ತಿಗಳು ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳು ಸುಲಭವಾಗಿ ಭೂ ಪರಿವರ್ತನೆ ಪಡೆದು ಬೆಟ್ಟಗುಡ್ಡಗಳನ್ನು ಸಮತಟ್ಟು ಮಾಡುತ್ತಿರುವುದಕ್ಕೆ ತಡೆ ಒಡ್ಡದಿದ್ದರೆ, ಮುಂದಿನ ದಿನಗಳಲ್ಲಿ ಕೊಡಗು ತನ್ನ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ.
ಬೇಕಾಬಿಟ್ಟಿ ಭೂಪರಿವರ್ತನೆಯ ಪರಿಣಾಮಗಳು ಕೊಡಗಿನಲ್ಲಿ ಈಗಾಗಲೇ ಕಂಡುಬರುತ್ತಿದೆ. ಬೆಟ್ಟ-ಗುಡ್ಡಗಳನ್ನು ಕಡಿದು ರಸ್ತೆ ಹಾಗೂ ಕಟ್ಟಡಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ತೀವ್ರ ಸ್ವರೂಪದ ಭೂ ಕುಸಿತ ಸಂಭವಿಸುತ್ತಿದೆ. 2018 ಮತ್ತು 2019ರ ಭೀಕರ ಪ್ರವಾಹ ಮತ್ತು ಭೂಕುಸಿತವೇ ಇದಕ್ಕೆ ಸಾಕ್ಷಿ. ಕಾಫಿ ತೋಟ ಮತ್ತು ಕೃಷಿ ಜಮೀನುಗಳು ವಾಣಿಜ್ಯ ಪ್ರದೇಶಗಳಾಗುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಾವೇರಿ ನದಿಯ ಉಗಮ ಸ್ಥಾನದಲ್ಲೇ ನೀರಿನ ಹರಿವಿನ ಸಾಮರ್ಥ್ಯ ಕ್ಷೀಣಿಸುತ್ತಿದೆ. ಕಾಡುಗಳ ಪಕ್ಕದಲ್ಲಿರುವ ಜಮೀನುಗಳು ರೆಸಾರ್ಟ್ಗಳಾಗುವುದರಿಂದ ಆನೆ, ಹುಲಿ ಹಾಗೂ ಇತರ ಪ್ರಾಣಿಗಳ ಸಂಚಾರ ಮಾರ್ಗಕ್ಕೆ ಅಡಚಣೆಯುಂಟಾಗಿ, ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ದಾಳಿ ಮಾಡುವ ಪ್ರಮಾಣ ಹೆಚ್ಚಾಗಿದೆ. ಕದಡಿದ ಪರಿಸರ ಸಮತೋಲನದಿಂದಾಗಿ ಮಂಜಿನ ನಗರಿ ಮಡಿಕೇರಿಯಲ್ಲಿಯೇ ಮಳೆಗಾಲದಲ್ಲಿ ಬೇಸಿಗೆಯ ಧಗೆ ಕಾಣುವಂತಾಗಿದೆ. ಬೇಸಿಗೆಯಲ್ಲಿ ಉಷ್ಣಾಂಶ ವಿಪರೀತ ಏರಿಕೆಯಾಗುತ್ತಿದೆ.
2018ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೀಕರ ಪ್ರಾಕತಿಕ ದುರಂತದ ಬೆನ್ನಲ್ಲೇ ದುರಂತ ಸಂಭವಿಸಿದ್ದ ಸ್ಥಳಗಳ ಪರಿಶೀಲನೆ ನಡೆಸಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಕೊಡಗಿನಲ್ಲಿ ಭೂ ಪರಿವರ್ತನೆ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು 2018ರ ನವೆಂಬರ್ 23ರಂದು ಅಂದಿನ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ನಂತರ 2019ರ ಮೇ 8ರಂದು ಆದೇಶದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ 15ರಿಂದ 20 ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ ಭೂ ಪರಿವರ್ತನೆಗೆ ಅನುಮತಿಸಲು ಆದೇಶ ಹೊರಡಿಸಲಾಗಿತ್ತು. ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆಗೆ 2020ರಲ್ಲಿ ಮತ್ತೆ ಯಥಾ ಪ್ರಕಾರ ಬಹುತೇಕ ಮುಕ್ತ ಅವಕಾಶ ಸಿಕ್ಕಿತ್ತು.
"

ಕೃಷಿ ಜಮೀನು ಪರಿವರ್ತನೆಗೆ ನಿಯಮಾವಳಿಗಳನ್ನು ಸರಳೀಕೃತಗೊಳಿಲಾಗಿದೆ. ಅರ್ಜಿದಾರನು ಅರ್ಜಿ ಸಲ್ಲಿಸಿದ ದಿನಾಂಕದಿAದ ಮೂವತ್ತು ದಿನಗಳೊಳಗಾಗಿ ಜಿಲ್ಲಾಧಿಕಾರಿ ಯಾವುದೇ ನಿರ್ಧಾರ ಕೈಗೊಳ್ಳದಿದ್ದಲ್ಲಿ, ಸ್ವಯಂ ಚಾಲಿತ ಪರಿವರ್ತನಾ ಶುಲ್ಕ ಪಾವತಿಗಾಗಿ ತಕ್ಷಣವೇ ನೋಟೀಸ್ ಜಾರಿಯಾಗುತ್ತದೆ. ಅರ್ಜಿದಾರರು ನೋಟೀಸ್ ನೀಡಿದ ದಿನಾಂಕದಿAದ ಮೂವತ್ತು ದಿನಗಳೊಳಗೆ ಪಾವತಿಯನ್ನು ಮಾಡದಿದ್ದಲ್ಲಿ ಡಿಜಿಟಲ್ ಸಹಿ ಮಾಡಲ್ಪಟ್ಟ ಪರಿವರ್ತನಾ ಆದೇಶವು ಆನ್‌ಲೈನ್ ವ್ಯವಸ್ಥೆ ಮೂಲಕ ಸ್ವಯಂ ಚಾಲಿತವಾಗಿ ಸೃಜನೆಯಾಗಿ ಅರ್ಜಿದಾರರಿಗೆ ಜಾರಿಯಾಗುತ್ತದೆ.

"

ಕರ್ನಾಟಕ ಲ್ಯಾಂಡ್ ರೆವೆನ್ಯೂ ಆ್ಯಕ್ಟ್ ಪ್ರಕಾರ ಯಾವುದೇ ಜಮ್ಮ ಬಾಣೆ, ಕಾಫಿ ತೋಟ, ಗದ್ದೆಗಳನ್ನು ವಾಣಿಜ್ಯ ಪರಿವರ್ತನೆ ಮಾಡಲು ಯಾರಿಗೂ ಯಾವ ಹಕ್ಕೂ ಇಲ್ಲ. ಯಾವುದೇ ಕಾರಣಕ್ಕೂ ಈ ಸೂಕ್ಷö್ಮ ಪರಿಸರದಲ್ಲಿ ಅಕ್ರಮ ಯೋಜನೆಗಳು ತಲೆಯೆತ್ತಲು ಬಿಡುವುದಿಲ್ಲ. ಜಲಮೂಲಗಳ ಆಶ್ರಯತಾಣಗಳಲ್ಲಿ ಪರಿವರ್ತನೆ ಯಾವುದೇ ಅಡೆ-ತಡೆ ಇಲ್ಲದೆ ನಡೆದಿದೆ. ಇಂಥ ಯೋಜನೆಗಳನ್ನು ಕೂಡಲೇ ಕೈಬಿಟ್ಟು ಹಸಿರೀಕರಣ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net